ನವದೆಹಲಿ: ಲೆಜೆಂಡ್ಸ್ ಕ್ರಿಕೆಟ್ ಲೀಗ್ ನಲ್ಲಿ ಗೌತಮ್ ಗಂಭೀರ್ ಮತ್ತು ಶ್ರೀಶಾಂತ್ ನಡುವೆ ಮಾತಿನ ಚಕಮಕಿಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಪಂದ್ಯದ ಬಳಿಕ ಶ್ರೀಶಾಂತ್ ಈ ಸಂದರ್ಭದಲ್ಲಿ ಗಂಭೀರ್ ವರ್ತನೆ ಸರಿ ಇರಲಿಲ್ಲ ಎಂದು ವಿಡಿಯೋ ಮೂಲಕ ಕಿಡಿ ಕಾರಿದ್ದರು. ಅವರ ಈ ವಿಡಿಯೋ ವೈರಲ್ ಆಗಿತ್ತು. ಗಂಭೀರ್ ಹೇಳಿದ ಮಾತು ಅಕ್ಷಮ್ಯವಾಗಿತ್ತು ಎಂದು ಶ್ರೀಶಾಂತ್ ಸಿಟ್ಟು ಹೊರಹಾಕಿದ್ದರು.
ತನ್ನ ಬೌಲಿಂಗ್ ನಲ್ಲಿ ಗಂಭೀರ್ ಒಂದು ಸಿಕ್ಸರ್ ಮತ್ತು ಬೌಂಡರಿ ಹೊಡೆದು ಮರು ಎಸೆತದಲ್ಲಿ ರನ್ ಬರದೇ ಇದ್ದಾಗ ಶ್ರೀಶಾಂತ್ ಬ್ಯಾಟಿಂಗ್ ಮಾಡುತ್ತಿದ್ದ ಗಂಭೀರ್ ಕಡೆಗೆ ದಿಟ್ಟಿಸಿ ನೋಡಿದ್ದರು. ಇದರಿಂದ ಕೆರಳಿದ ಗಂಭೀರ್ ಏನು ಎಂಬಂತೆ ಕೈ ಸನ್ನೆ ಮಾಡಿದ್ದಲ್ಲದೆ, ನಾನು ನಿನ್ನಂತೆ ಫಿಕ್ಸರ್ ಅಲ್ಲ ಎಂದಿದ್ದರು.
ಈ ಒಂದು ವಾಕ್ಯವೇ ಶ್ರೀಶಾಂತ್ ಆಕ್ರೋಶಗೊಳ್ಳಲು ಕಾರಣವಾಗಿದೆ. ಇದೇ ಕಾರಣಕ್ಕೆ ಅವರು ಪಂದ್ಯದ ಬಳಿಕವೂ ವಿಡಿಯೋ ಮಾಡಿ ಗಂಭೀರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆದರೆ ತಾನು ಹೀಗೆ ಹೇಳಲು ಕಾರಣ ಕೂಡಾ ಶ್ರೀಶಾಂತ್ ತನಗೆ ಅಭದ್ರತೆಯ ನಾಯಿ ಎಂದಿದ್ದು ಎಂದು ಬಳಿಕ ಗಂಭೀರ್ ಸ್ಪಷ್ಟನೆ ನೀಡಿದ್ದರು.
ಶ್ರೀಶಾಂತ್ ಮ್ಯಾಚ್ ಫಿಕ್ಸಿಂಗ್ ಕಳಂಕದಿಂದಾಗಿಯೇ ಕ್ರಿಕೆಟ್ ನಿಂದ ಕೆಲವು ವರ್ಷ ನಿಷೇಧಕ್ಕೊಳಗಾಗಿದ್ದರು. ಬಳಿಕ ಕೋರ್ಟ್ ನಲ್ಲಿ ವಿಚಾರಣೆ ನಡೆದು ಕಳಂಕದಿಂದ ಮುಕ್ತರಾಗಿದ್ದರು. ಹಾಗಿದ್ದರೂ ಅವರಿಗೆ ಐಪಿಎಲ್ ಆಗಲೀ ರಾಷ್ಟ್ರೀಯ ತಂಡದಲ್ಲಾಗಲೀ ಅವಕಾಶ ಸಿಗಲೇ ಇಲ್ಲ. ಇದೇ ವಿಚಾರವನ್ನಿಟ್ಟುಕೊಂಡು ಗಂಭೀರ್ ವ್ಯಂಗ್ಯ ಮಾಡಿದ್ದು ಶ್ರೀಶಾಂತ್ ಕೋಪ ಹೆಚ್ಚಿಸಿತು.