ರಾಂಚಿ: ಛೇ.. ಅದೇಕೆ ನಾನು ಹೀಗೆ ಮಾಡಿ ಬಿಟ್ಟೆ..? ಹೀಗಂತ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಅದೆಷ್ಟು ಬಾರಿ ಅಂದುಕೊಂಡರೋ. ತೃತೀಯ ಟೆಸ್ಟ್ ನ ಅಂತಿಮ ದಿನ ಸ್ಮಿತ್ ಔಟಾದಾಗ ನೋಡುಗರಿಗೂ ಹೀಗೇ ಅನಿಸಿತ್ತು.
ಕೊಂಚ ವೈಡ್ ಎಸೆತ ನಿರೀಕ್ಷಿಸುತ್ತಿದ್ದ ಸ್ಮಿತ್, ಜಡೇಜಾ ಎಸೆದ ಆ ನೇರ ಎಸೆತವನ್ನು ಜಡ್ಜ್ ಮಾಡುವುದರಲ್ಲಿ ಎಡವಿದರು. ಬ್ಯಾಟ್ ಮೇಲೆತ್ತಿ ಹಿಡಿದು ಬಾಲ್ ವಿಕೆಟ್ ಕೀಪರ್ ಕೈಗೆ ಹೋಗಲು ಅನುವು ಮಾಡಿಕೊಡುವವರಂತೆ ನಿಂತಿದ್ದರು. ಆದರೆ ದುರಾದೃಷ್ಟವಶಾತ್ ಅದು ವಿಕೆಟ್ ಎಗರಿಸಿತ್ತು. ತಾವಾಗಿಯೇ ವಿಕೆಟ್ ಕೈ ಚೆಲ್ಲುವಂತಾಯಿತು ಸ್ಮಿತ್. ಭಾರತೀಯರ ಖುಷಿಗೆ ಪಾರವೇ ಇರಲಿಲ್ಲ.
ದ್ವಿತೀಯ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ಭೋಜನ ವಿರಾಮದ ವೇಳೆಗೆ 4 ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿತ್ತು. ಭಾರತದ ಮೊದಲ ಇನಿಂಗ್ಸ್ ಮೊತ್ತ ದಾಟಲು ಇನ್ನೂ ರನ್ ಗಳಿಸಬೇಕಿದೆ. ಆದರೆ ರನ್ ಗಳಿಸುವುದರ ಜತೆಗೆ ವಿಕೆಟ್ ಉಳಿಸಿಕೊಳ್ಳುವ ಸಂಕಷ್ಟದಲ್ಲಿ ಪ್ರವಾಸಿಗರಿದ್ದಾರೆ.
ನಿನ್ನೆಯಷ್ಟೇ ಆಸ್ಟ್ರೇಲಿಯಾ ಕೋಚ್ ಡ್ಯಾರೆನ್ ಲೆಹಮನ್ ರವೀಂದ್ರ ಜಡೇಜಾ ನಿರ್ಣಾಯಕ ಬೌಲರ್ ಎಂದಿದ್ದರು. ಅದು ನಿಜವೇ. ಇಂದು ಜಡೇಜಾ ಆಸ್ಟ್ರೇಲಿಯಾದ ಪ್ರಮುಖ ವಿಕೆಟ್ ಸ್ಮಿತ್ ರನ್ನು ಬಲೆಗೆ ಕೆಡವಿ ಆ ಮಾತನ್ನು ಸಮರ್ಥಿಸಿದರು. ಭಾರತ ಪಂದ್ಯ ಗೆಲ್ಲಬೇಕಾದರೆ ಆದಷ್ಟು ಬೇಗ ಆಸ್ಟ್ರೇಲಿಯಾವನ್ನು ಆಲೌಟ್ ಮಾಡಲೇಬೇಕು. ಊಟ ಮುಗಿದ ಮೇಲೆ ಭಾರತ ಹೇಗೆ ಆಡುತ್ತದೆ ಎಂದು ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ