ಮುಂಬೈ: ಟೀಂ ಇಂಡಿಯಾ ಕೋಚ್ ಆಗಿದ್ದಾಗ ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ನಡುವಿನ ವೈಮನಸ್ಯ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ವೈಮನಸ್ಯಕ್ಕೆ ನಿಜ ಕಾರಣವೇನೆಂದು ಟೀಂ ಇಂಡಿಯಾ ಮಾಜಿ ಮ್ಯಾನೇಜರ್ ರತ್ನಾಕರ್ ಶೆಟ್ಟಿ ತಮ್ಮ ಹೊಸ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಕೋಚ್ ಅನಿಲ್ ಕುಂಬ್ಳೆ ಮೇಲೆ ಅಸಮಾಧಾನಗೊಳ್ಳಲು ಕಾರಣವೇನೆಂದು ರತ್ನಾಕರ್ ಶೆಟ್ಟಿ ಬರೆದುಕೊಂಡಿದ್ದಾರೆ. ಆಟಗಾರರಿಗೆ ಬೆಂಬಲವಾಗಿ ನಿಲ್ಲದ ಕಾರಣಕ್ಕೆ ಕುಂಬ್ಳೆ ಮೇಲೆ ಕೊಹ್ಲಿ ಅಸಮಾಧಾನಗೊಂಡಿದ್ದರು ಎಂದು ಅವರು ಹೇಳಿಕೊಂಡಿದ್ದಾರೆ.
ಅದರಲ್ಲೂ ವಿಶೇಷವಾಗಿ 2017 ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಸೋತ ಮೇಲೆ ಕುಂಬ್ಳೆ ನಡೆದುಕೊಂಡ ರೀತಿ ಕೊಹ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಕುಂಬ್ಳೆ ಆಟಗಾರರ ಪರ ನಿಲ್ಲದೇ ಡ್ರೆಸ್ಸಿಂಗ್ ರೂಂನಲ್ಲಿ ಆತಂಕದ ವಾತಾವರಣ ಸೃಷ್ಟಿಸುತ್ತಾರೆ ಎಂಬುದು ಕೊಹ್ಲಿ ಅರೋಪವಾಗಿತ್ತು ಎಂದಿದ್ದಾರೆ. ಇದನ್ನು ಅವರು ಲಂಡನ್ ನಲ್ಲಿ ಪಾಕ್ ವಿರುದ್ಧದ ಪಂದ್ಯದ ಬಳಿಕ ನಡೆದ ಸಭೆಯಲ್ಲಿ ಹೊರಹಾಕಿದ್ದರು ಎಂಬ ವಿಚಾರ ನನಗೆ ತಿಳಿದುಬಂದಿತ್ತು ಎಂದು ರತ್ನಾಕರ್ ಶೆಟ್ಟಿ ಹೇಳಿದ್ದಾರೆ. ಆಗ ಕೊಹ್ಲಿ ಮೇಲುಗೈ ಸಾಧಿಸಿದ್ದರು. ಬಿಸಿಸಿಐ ಸಭೆಯಲ್ಲಿ ಕುಂಬ್ಳೆಯೆದುರೇ ಮತ್ತೆ ಕೋಚ್ ಹುಡುಕಾಟದ ಬಗ್ಗೆ ಘೋಷಣೆ ಮಾಡಿದರು. ಇದು ಅನಿಲ್ ಕುಂಬ್ಳೆ ಸೇರಿದಂತೆ ಎಲ್ಲರನ್ನೂ ದಂಗುಬಡಿಸಿತ್ತು ಎಂದು ರತ್ನಾಕರ್ ಶೆಟ್ಟಿ ಹೇಳಿದ್ದಾರೆ.