ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಅಂತಿಮ ದಿನವಾದ ಇಂದು ಆರಂಭದಿಂದಲೇ ಮಳೆ ಕಾಟ ಎದುರಾಗಿದೆ. ಇದರಿಂದಾಗಿ ಇಂದಿನ ದಿನದಾಟ ಇನ್ನೂ ಆರಂಭವಾಗಿಲ್ಲ.
ಪಂದ್ಯ ರೋಚಕ ಘಟ್ಟದಲ್ಲಿರುವಾಗಲೇ ಈ ರೀತಿ ಮಳೆ ಅಡ್ಡಿಯಾಗಿರುವುದು ಅಭಿಮಾನಿಗಳಿಗೆ ತೀವ್ರ ನಿರಾಸೆ ತಂದಿದೆ. ಮೊದಲ ಇನಿಂಗ್ಸ್ ನಲ್ಲಿ ಭಾರತ 438 ಕ್ಕೆ ಆಲೌಟ್ ಆಗಿದ್ದರೆ, ವಿಂಡೀಸ್ 255 ರನ್ ಗಳಿಸಿತ್ತು. ಮೊದಲ ಇನಿಂಗ್ಸ್ ನಲ್ಲಿ 183 ರನ್ ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆಡಿದ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ವಿಂಡೀಸ್ ಗೆಲುವಿಗೆ 365 ರನ್ ಗಳ ಗುರಿ ನಿಗದಿಯಾಗಿತ್ತು.
ಆದರೆ ನಿನ್ನೆಯ ದಿನ ಮಳೆಯ ಕಾಟದ ನಡುವೆಯೂ ಪಂದ್ಯ ನಡೆದಿದ್ದು ದ್ವಿತೀಯ ಇನಿಂಗ್ಸ್ ನಲ್ಲಿ ವಿಂಡೀಸ್ 2 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿತ್ತು. ಇಂದು ಕೊನೆಯ ದಿನ ವಿಂಡೀಸ್ 289 ರನ್ ಗಳಿಸಬೇಕಿದ್ದು, ಟೀಂ ಇಂಡಿಯಾಗೆ ಗೆಲುವಿಗೆ 8 ವಿಕೆಟ್ ಬೇಕಾಗಿತ್ತು. ಆದರೆ ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆಯಾಗಿದೆ. ಸದ್ಯಕ್ಕೆ ತೀವ್ರ ಮಳೆಯಾಗುತ್ತಿದ್ದು, ಸದ್ಯಕ್ಕಂತೂ ಪಂದ್ಯ ಆರಂಭವಾಗುವ ಲಕ್ಷಣವಿಲ್ಲ.