ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರ ರೋಚಕತೆಗೆ ಮಳೆ ತಣ್ಣೀರೆರಚಿದೆ. ಮಳೆಯಿಂದಾಗಿ ಕಳೆದ ಎರಡು ದಿನಗಳಿಂದ ಪಂದ್ಯಗಳೇ ನಡೆದಿಲ್ಲ.
ನಿನ್ನೆ ನಡೆಯಬೇಕಿದ್ದ ಶ್ರೀಲಂಕಾ-ಬಾಂಗ್ಲಾದೇಶ ಪಂದ್ಯ ಮೊನ್ನೆ ನಡೆಯಬೇಕಿದ್ದ ದ.ಆಫ್ರಿಕಾ-ವೆಸ್ಟ್ ಇಂಡೀಸ್ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಅದಕ್ಕೂ ಮೊದಲು ಲಂಕಾ-ಆಸ್ಟ್ರೇಲಿಯಾ ನಡುವಿನ ಪಂದ್ಯ ಮಳೆಯಿಂದಾಗಿ ಡಕ್ ವರ್ತ್ ಲೂಯಿಸ್ ನಿಯಮದನ್ವಯ ನಿರ್ಧಾರವಾಗಿತ್ತು. ಇದಲ್ಲದೆ ಲಂಕಾ-ಪಾಕಿಸ್ತಾನ ನಡುವಿನ ಪಂದ್ಯ ರದ್ದಾಗಿತ್ತು. ಇದರೊಂದಿಗೆ ಒಟ್ಟು ನಾಲ್ಕು ಪಂದ್ಯಗಳು ಮಳೆಗೆ ಆಹುತಿಯಾಗಿವೆ.
ಇದರಿಂದ ಹೆಚ್ಚು ನಷ್ಟವಾಗಿದ್ದು ಶ್ರೀಲಂಕಾ ತಂಡಕ್ಕೆ ಆ ತಂಡಕ್ಕೆ ಸತತವಾಗಿ ಎರಡು ಪಂದ್ಯಗಳಲ್ಲಿ ಆಡಲು ಸಾಧ್ಯವಾಗದೇ ಎದುರಾಳಿಯೊಂದಿಗೆ ಅಂಕ ಹಂಚಿಕೊಳ್ಳಬೇಕಾಗಿದೆ. ಬಾಂಗ್ಲಾದೇಶಕ್ಕೂ ಲಂಕಾ ವಿರುದ್ಧ ಗೆದ್ದು ಸೆಮಿಫೈನಲ್ ಹಾದಿ ಸುಗಮಗೊಳಿಸುವ ವಿಶ್ವಾಸವಿತ್ತು. ಆದರೆ ಮಳೆಯಿಂದಾಗಿ ಸಂಕಟ ಎದುರಾಗಿದೆ.
ಹವಾಮಾನ ಇಲಾಖೆ ವರದಿ ಪ್ರಕಾರ ಮುಂದಿನ ಕೆಲವು ದಿನ ಇಂಗ್ಲೆಂಡ್ ನಲ್ಲಿ ಮಳೆ ಮುಂದುವರಿಯಲಿದೆ. ಹೀಗಾಗಿ ಮತ್ತಷ್ಟು ಪಂದ್ಯಗಳು ಮಳೆಗೆ ಆಹುತಿಯಾಗುವ ಸಾಧ್ಯತೆಯಿದೆ. ಇದು ಅಭಿಮಾನಿಗಳು ಮತ್ತು ಕ್ರಿಕೆಟಿಗರನ್ನು ನಿರಾಸೆಗೆ ನೂಕಿದೆ.