ಮುಂಬೈ: ಭಾರತೀಯ ಕ್ರಿಕೆಟ್ ನ ವಾಲ್ ಎಂದೇ ಜನ ಜನಿತವಾಗಿರುವ ರಾಹುಲ್ ದ್ರಾವಿಡ್ ತಮ್ಮ ಮೆಚ್ಚಿನ ಕ್ರಿಕೆಟಿಗರ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಜೀವನ ಪೂರ್ತಿ ಒಬ್ಬ ಕ್ರಿಕೆಟಿಗನೊಂದಿಗೆ ಬ್ಯಾಟಿಂಗ್ ಮಾಡುತ್ತೀರೆಂದರೆ ಅವರು ಯಾರಾಗಬಹುದು ಎಂದು ದ್ರಾವಿಡ್ ಗೆ ಪ್ರಶ್ನಿಸಿದಾಗ ಅವರು ಸಚಿನ್ ತೆಂಡುಲ್ಕರ್ ಹೆಸರು ಹೇಳಿದ್ದಾರೆ.
‘ನಾನು ಆಡಿದ ಶ್ರೇಷ್ಠ ಆಟಗಾರನೆಂದರೆ ಸಚಿನ್ ತೆಂಡುಲ್ಕರ್. ಕ್ಲಾಸ್ ಮತ್ತು ಕ್ವಾಲಿಟಿ ಎರಡಲ್ಲೂ ಅವರು ಬೆಸ್ಟ್. ಹಾಗಾಗಿ ಸಚಿನ್ ಜತೆಗೆ ಬ್ಯಾಟ್ ಮಾಡಲು ಇಷ್ಟಪಡುವೆ’ ಎಂದು ದ್ರಾವಿಡ್ ಹೇಳಿದ್ದಾರೆ. ಅಷ್ಟೇ ಅಲ್ಲದೆ, ತನ್ನ ಸಮಕಾಲೀನರಲ್ಲದ ಆಟಗಾರರ ಪೈಕಿ ಸುನಿಲ್ ಗವಾಸ್ಕರ್ ಮತ್ತು ಗುಂಡಪ್ಪ ವಿಶ್ವನಾಥ್ ಜತೆಗೆ ಬ್ಯಾಟಿಂಗ್ ಮಾಡಲು ಬಯಸುವೆ ಎಂದಿದ್ದಾರೆ.
ಇನ್ನು ಕೋಲ್ಕೊತ್ತಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಟೆಸ್ಟ್ ಇನಿಂಗ್ಸ್ ಆಡುವಾಗ ಆಸೀಸ್ ಆಟಗಾರರು ತನ್ನನ್ನು ಸ್ಲೆಡ್ಜಿಂಗ್ ಮಾಡಿದ್ದನ್ನು ದ್ರಾವಿಡ್ ತಮಾಷೆಯ ಸ್ಲೆಡ್ಜಿಂಗ್ ಎಂದಿದ್ದಾರೆ. ನಾನು ಮೂರನೇ ಕ್ರಮಾಂಕದ ಆಟಗಾರನೆಂದು ಟೆಸ್ಟ್ ಆಡಿದ್ದೆ. ಆದರೆ 6 ನೇ ಕ್ರಮಾಂಕದಲ್ಲಿ ಆಡಿದ್ದೆ. ಹೀಗಾಗಿ ನಾನು ಬ್ಯಾಟಿಂಗ್ ಮಾಡುತ್ತಿದ್ದಾಗ ಆಸೀಸ್ ಆಟಗಾರರು ಮುಂದಿನ ಟೆಸ್ಟ್ ನಲ್ಲಿ ನೀನು 12 ನೇ ಆಟಗಾರ ಎಂದು ಸ್ಲೆಡ್ಜಿಂಗ್ ಮಾಡಿದ್ದರು. ಇದು ನನಗೆ ತಮಾಷೆ ಎನಿಸಿತ್ತು ಎಂದು ದ್ರಾವಿಡ್ ಸ್ಮರಿಸಿದ್ದಾರೆ.
ಪ್ರಸಕ್ತ ವಿಶ್ವ ಬೌಲರ್ ಗಳ ಪೈಕಿ ದ.ಆಫ್ರಿಕಾದ ಕಗಿಸೋ ರಬಾಡಾ ಬೌಲಿಂಗ್ ಎದುರಿಸುವುದು ಕಷ್ಟವಾಗಬಹುದು ಎಂದಿರುವ ದ್ರಾವಿಡ್ ಭಾರತೀಯರ ಪೈಕಿ ಭುವನೇಶ್ವರ್ ಕುಮಾರ್ ಬೆಸ್ಟ್ ಬೌಲರ್ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.