ಬೆಂಗಳೂರು: ರಾಹುಲ್ ದ್ರಾವಿಡ್ ನೇತೃತ್ವದ ಬೆಂಗಳೂರಿನ ಎನ್ ಸಿಎ ಜಸ್ಪ್ರೀತ್ ಬುಮ್ರಾಗೆ ಫಿಟ್ ನೆಸ್ ಟೆಸ್ಟ್ ಮಾಡಲು ನಿರಾಕರಿಸಿರುವುದು ಇದೀಗ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದೆ.
ಬುಮ್ರಾ ಗಾಯದ ಬಳಿಕ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಳ್ಳದೇ ಇರುವುದು ಎನ್ ಸಿಎ ಅಸಮಾಧನಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಬುಮ್ರಾಗೆ ಫಿಟ್ ನೆಸ್ ಟೆಸ್ಟ್ ಮಾಡಲು ಎನ್ ಸಿಎ ಹಿಂದೇಟು ಹಾಕಿತು ಎನ್ನಲಾಗಿದೆ.
ಆದರೆ ಇದು ಎನ್ ಸಿಎ ಅಧ‍್ಯಕ್ಷ ರಾಹುಲ್ ದ್ರಾವಿಡ್ ಗೆ ಉರುಳಾಗುವ ಹಂತದಲ್ಲಿದೆ. ಈ ಬಗ್ಗೆ ದ್ರಾವಿಡ್ ಜತೆ ಮಾತುಕತೆ ನಡೆಸುವುದಾಗಿ ಈಗಾಗಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಭಾರತದ ಯಾವುದೇ ಕ್ರಿಕೆಟಿಗರೂ ಗಾಯದ ಬಳಿಕ ಎನ್ ಸಿಎನಿಂದ ಫಿಟ್ ನೆಸ್ ಪ್ರಮಾಣ ಪತ್ರ ಪಡೆದುಕೊಳ್ಳಬೇಕು. ಆದರೆ ಈಗ ಎನ್ ಸಿಎ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವುದರಿಂದ ಬುಮ್ರಾ ಭವಿಷ್ಯ ಅತಂತ್ರವಾಗಿದೆ. ಪ್ರತಿಷ್ಠೆಯ ವಿಚಾರಕ್ಕೆ ಬುಮ್ರಾರಂತಹ ಪ್ರತಿಭಾವಂತರ ಭವಿಷ್ಯ ಅತಂತ್ರದಲ್ಲಿರುವುದು ಬಿಸಿಸಿಐನ ಕೆಲವು ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿಚಾರ ಇದೀಗ ದ್ರಾವಿಡ್ ಹೆಸರಿಗೆ ಕಳಂಕ ತರುವ ಅಪಾಯದಲ್ಲಿದೆ.