ಮುಂಬೈ: ಇತ್ತೀಚೆಗಿನ ದಿನಗಳಲ್ಲಿ ಟೀಂ ಇಂಡಿಯಾ ಐಸಿಸಿ ಟೂರ್ನಿಗಳಲ್ಲಿ ಮುಗ್ಗರಿಸುತ್ತಿರುವುದು ಸಾಮಾನ್ಯವಾಗಿದೆ. ಇದರಿಂದಾಗಿ ದಕ್ಷಿಣ ಆಫ್ರಿಕಾದಂತೆ ಭಾರತದ ಮೇಲೂ ಚೋಕರ್ಸ್ ಹಣೆಪಟ್ಟಿ ಬಿದ್ದಿದೆ. ಆ ಕಳಂಕ ತೀರಿಸುವ ಜವಾಬ್ಧಾರಿ ಈಗ ರಾಹುಲ್ ದ್ರಾವಿಡ್ ಮೇಲಿದೆ.
ಹಿಂದೆ ಆಟಗಾರನಾಗಿದ್ದಾಗ ದ್ರಾವಿಡ್ ಆಪತ್ ಬಾಂಧವರಾಗಿ ಟೀಂ ಇಂಡಿಯಾವನ್ನು ಅನೇಕ ಸಂದರ್ಭಗಳಲ್ಲಿ ಕಾಪಾಡಿದ್ದಾರೆ. ಈಗ ಕೋಚ್ ಆಗಿ ದ್ರಾವಿಡ್ ಗೆ ಟೀಂ ಇಂಡಿಯಾವನ್ನು ಮತ್ತೆ ಐಸಿಸಿ ಟೂರ್ನಿಗಳಲ್ಲಿ ಗೆಲ್ಲಿಸುವ ಜವಾಬ್ಧಾರಿ ಬಿದ್ದಿದೆ.
ರೋಹಿತ್ ಶರ್ಮಾ ಟಿ20 ನಾಯಕರಾಗುವುದರೊಂದಿಗೆ ದ್ರಾವಿಡ್ ಗೆ ತಮ್ಮದೇ ಗರಡಿಯಲ್ಲಿ ಪಳಗಿದ್ದ ಯುವ ಆಟಗಾರರಿಗೆ ಮತ್ತೆ ಮಾರ್ಗದರ್ಶನ ನೀಡುವ ಅವಕಾಶ. ಯುವ ತಂಡವನ್ನು ಕಟ್ಟಿ ಅವರನ್ನು ದೊಡ್ಡ ವೇದಿಕೆಯಲ್ಲಿ ಮತ್ತೊಮ್ಮೆ ಪ್ರಶಸ್ತಿ ಗೆಲ್ಲಿಸಿಕೊಡುವ ಅಪಾರ ನಿರೀಕ್ಷೆ ದ್ರಾವಿಡ್ ಮೇಲಿದೆ.