ಮುಂಬೈ: ಟೀಂ ಇಂಡಿಯಾದಲ್ಲಿ ಆಟಗಾರರ ಆಯ್ಕೆ ಬಗ್ಗೆ ಇತ್ತೀಚೆಗೆ ಅಭಿಮಾನಿಗಳಿಂದ ತೀವ್ರ ಆಕ್ರೋಶ ಕೇಳಿಬರುತ್ತಿದೆ. ಅದರಲ್ಲೂ ಮುಂಬೈ ಇಂಡಿಯನ್ಸ್ ಆಟಗಾರರಿಗೇ ಹೆಚ್ಚು ಅವಕಾಶ, ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಆರೋಪ ಕೇಳಿಬಂದಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಬಳಿಕ ಟಿ20 ಸರಣಿಯಲ್ಲೂ ತಂಡದ ಆಯ್ಕೆಯಲ್ಲಿ ಮುಂಬೈ ಆಟಗಾರರಿಗೆ ಹೆಚ್ಚು ಅವಕಾಶ ನೀಡಲಾಗಿದೆ ಎಂಬುದು ನೆಟ್ಟಿಗರ ಆರೋಪ. ಯಶಸ್ವಿ ಜೈಸ್ವಾಲ್ ರಾಜಸ್ಥಾನ್ ಪರ ಐಪಿಎಲ್ ಆಡುತ್ತಾರೆ. ಅವರು ಇತ್ತೀಚೆಗೆ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆದರೆ ಟಿ20 ಸರಣಿಯಲ್ಲಿ ಅವರಿಗೆ ಅವಕಾಶವೇ ನೀಡಿಲ್ಲ. ಅವರ ಬದಲು ಮುಂಬೈ ಪರ ಆಡುವ ತಿಲಕ್ ವರ್ಮಗೆ ಅವಕಾಶ ನೀಡಲಾಗಿದೆ.
ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್ ರನ್ನು ಕಡೆಗಣಿಸಿ ಇಶಾನ್ ಕಿಶನ್ ಗೆ ಅವಕಾಶ ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಅಗ್ರ ಕ್ರಮಾಂಕದಲ್ಲಿ ಉತ್ತಮವಾಗಿ ಆಡುವ ಸಂಜುರನ್ನು ಕೆಳ ಕ್ರಮಾಂಕದಲ್ಲಿ ಆಡಿಸಲಾಗುತ್ತದೆ. ಇಶಾನ್ ಗೆ ಆರಂಭಿಕರಾಗಿ ಅವಕಾಶ ನೀಡಲಾಗುತ್ತದೆ. ಸೂರ್ಯಕುಮಾರ್ ಯಾದವ್ ಎಷ್ಟೇ ವಿಫಲರಾದರೂ ಅವರಿಗೆ ಮತ್ತೆ ಮತ್ತೆ ಅವಕಾಶ ನೀಡಲಾಗುತ್ತಿದೆ. ನಾಯಕ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ಪರ ಐಪಿಎಲ್ ಆಡುವುದರಿಂದ ಇತ್ತೀಚೆಗೆ ಮುಂಬೈ ಇಂಡಿಯನ್ಸ್ ಆಟಗಾರರಿಗೇ ಟೀಂ ಇಂಡಿಯಾದಲ್ಲಿ ಮಣೆ ಹಾಕಲಾಗುತ್ತಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.