ಪರ್ತ್: ಏಕದಿನ ವಿಶ್ವಕಪ್ ಫೈನಲ್ ಗೆಲುವಿನ ಬಳಿಕ ಟ್ರೋಫಿ ಮೇಲೆ ಕಾಲಿಟ್ಟು ಕೂತು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಮಿಚೆಲ್ ಮಾರ್ಷ್ ಇದೀಗ ಪಂದ್ಯಶ್ರೇಷ್ಠ ಪ್ರಶಸ್ತಿ ಮೆಡಲ್ ನ್ನು ಅಭಿಮಾನಿಗೆ ದಾನ ಮಾಡಿ ಗಮನ ಸೆಳೆದಿದ್ದಾರೆ.
ಪರ್ತ್ ಮೈದಾನದಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ 360 ರನ್ ಗಳ ಭಾರೀ ಅಂತರದಿಂದ ಗೆದ್ದುಕೊಂಡಿತ್ತು. ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ 90 ಎರಡನೇ ಇನಿಂಗ್ಸ್ ನಲ್ಲಿ ಅಜೇಯ 63 ರನ್ ಜೊತೆಗೆ ಒಂದು ವಿಕೆಟ್ ಕೂಡಾ ಕಬಳಿಸಿದ್ದ ಮಿಚೆಲ್ ಮಾರ್ಷ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಆಸ್ಟ್ರೇಲಿಯಾದಲ್ಲಿಯೇ ನಡೆಯುವ ಟೆಸ್ಟ್ ಪಂದ್ಯವಾಗಿರುವುದರಿಂದ ಸಾಕಷ್ಟು ಆಸೀಸ್ ಅಭಿಮಾನಿಗಳು ಮೈದಾನದಲ್ಲಿ ನೆರೆದಿದ್ದರು. ಅವರ ಪೈಕಿ ಮಕ್ಕಳೂ ಇದ್ದರು.
ಹೀಗಾಗಿ ಪಂದ್ಯದ ಬಳಿಕ ತಮಗೆ ಸಿಕ್ಕ ಪಂದ್ಯಶ್ರೇಷ್ಠ ಪ್ರಶಸ್ತಿಯ ಮೆಡಲ್ ನ್ನು ಮಿಚೆಲ್ ಮಾರ್ಷ್ ಗ್ಯಾಲರಿ ಬಳಿ ಹೋಗಿ ಅಲ್ಲಿ ನಿಂತು ಚಿಯರ್ ಮಾಡುತ್ತಿದ್ದ ಅಭಿಮಾನಿ ಬಾಲಕನ ಕುತ್ತಿಗೆಗೆ ತಾವೇ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.