ಬೆಂಗಳೂರು: ಕಾಫಿ ವಿತ್ ಕರಣ್ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಕಾಮೆಂಟ್ ಮಾಡಿದ್ದಕ್ಕೆ ಹಾರ್ದಿಕ್ ಪಾಂಡ್ಯ ಜತೆಗೆ ನಿಷೇಧ ಶಿಕ್ಷೆಗೊಳಗಾಗಿದ್ದ ಕೆಎಲ್ ರಾಹುಲ್ ಸಾಕಷ್ಟು ಮಾನಸಿಕ ಹಿಂಸೆ ಅನುಭವಿಸಿದ್ದಾರೆ.
ಇದೀಗ ಅಲ್ಲಿ ಹೋದ ಮಾನ, ಗೌರವ ಮರಳಿ ಪಡೆಯಲು ಕೆಎಲ್ ರಾಹುಲ್ ಬೇರೆಯದೇ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಸದ್ಯಕ್ಕೆ ಎ ತಂಡದ ಪರ ಟೆಸ್ಟ್ ಆಡುತ್ತಿರುವ ರಾಹುಲ್ ಮರಳಿ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಲು ಹರಸಾಹಸ ಮಾಡುತ್ತಿದ್ದಾರೆ.
ಅದರ ಜತೆಗೆ ಅಪಘಾತದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಕ್ರಿಕೆಟಿಗ ಜೇಕಬ್ ಮಾರ್ಟಿನ್ ಕುಟುಂಬಕ್ಕೆ ದೊಡ್ಡ ಮೊತ್ತದ ಧನ ಸಹಾಯ ಮಾಡಿದ್ದಾರೆ ಎಂಬ ಸುದ್ದಿ ಬಂದಿದೆ. ಜೇಕಬ್ ಕುಟುಂಬ ಕೂಡಾ ಇದನ್ನು ಸ್ಪಷ್ಟಪಡಿಸಿದೆ. ಜೇಕಬ್ ಅಸಹಾಯಕ ಪರಿಸ್ಥಿತಿಗೆ ಹಲವು ಕ್ರಿಕೆಟಿಗರು, ಬಿಸಿಸಿಐ ನೆರವು ನೀಡಿತ್ತು.
ಆದರೆ ಇವರೆಲ್ಲರಿಗಿಂತ ದೊಡ್ಡ ಮೊತ್ತದ ಧನ ಸಹಾಯ ರಾಹುಲ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಎಷ್ಟು ಹಣ ಸಹಾಯ ಮಾಡಿದರು ಎಂದು ಮೊತ್ತ ಬಹಿರಂಗಪಡಿಸದಂತೆ ರಾಹುಲ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಹಿಂದೆ ಚೆಂಡು ವಿರೂಪ ಪ್ರಕರಣದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗರಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಕೂಡಾ ನಿಷೇಧಕ್ಕೊಳಗಾಗಿ ಅವಮಾನ ಅನುಭವಿಸಿದ ಬಳಿಕ ಇದೇ ರೀತಿ ಅಸಹಾಯಕರಿಗೆ ಧನ ಸಹಾಯ ಮಾಡಿ ತಮ್ಮ ಮಾನಸಿಕ ನೋವನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದ್ದರು. ಇದೀಗ ರಾಹುಲ್ ಕೂಡಾ ಅದೇ ಹಾದಿಯಲ್ಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ