ಬೆಂಗಳೂರು: ಪುಣೆ ಟೆಸ್ಟ್ ನ ಪ್ರದರ್ಶನ ಮತ್ತೆ ರಿಪೀಟ್ ಮಾಡಲ್ಲ ಎಂದು ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಪ್ರಾಮಿಸ್ ಮಾಡಿದ್ದರು. ಆ ಭರವಸೆ ಉಳಿಸುವ ಕೆಲಸಕ್ಕೆ ಕೆಎಲ್ ರಾಹುಲ್ ಅಡಿಗಲ್ಲು ಹಾಕಿದರು. ಅವರ ಸೊಗಸಾದ ಬ್ಯಾಟಿಂಗ್ ಗೆ ದ್ವಿತೀಯ ಟೆಸ್ಟ್ ನ ಮೊದಲ ದಿನದ ಊಟದ ವಿರಾಮಕ್ಕೆ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿತು.
ಇಂದು ಕೊಹ್ಲಿ ಟಾಸ್ ಗೆದ್ದರು. ರಾಹುಲ್ ಮೊದಲ ಬಾಲ್ ಗೇ ಬೌಂಡರಿ ಹೊಡೆದು ಶುಭಾರಂಭ ಮಾಡಿದರು. ಹೊಸಬ ಅಭಿನವ್ ಮುಕುಂದ್ ಶೂನ್ಯಕ್ಕೆ ಔಟಾದರೂ ಅದಕ್ಕೆ ಟೀಂ ಇಂಡಿಯಾ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಮುಕುಂದ್ ಇನ್ನೂ ಆಸ್ಟ್ರೇಲಿಯಾದ ವೇಗದ ಬಾಲ್ ಎದುರಿಸಲು ಕಲಿಯಬೇಕಿದೆ.
ನಂತರ ಬಂದ ಚೇತೇಶ್ವರ್ ಪೂಜಾರ ಎಂದಿನಂತೆ ಇನಿಂಗ್ಸ್ ಕಟ್ಟುವ ಕೆಲಸ. ಆದರೆ ಪೂಜಾರಗೆ ಊಟಕ್ಕೆ ಹೋಗಲು ಅರ್ಜೆಂಟಾಗಿತ್ತೋ ಏನೋ. ಭೋಜನ ವಿರಾಮಕ್ಕಿಂತ ಮೊದಲಿನ ಓವರ್ ನಲ್ಲೇ ಕೇವಲ 17 ರನ್ ಗಳಿಗೆ ಔಟಾಗಿ ಬಿಟ್ಟರು. ಇಬ್ಬರೂ ನಿಧಾನವಾಗಿ ಇನಿಂಗ್ಸ್ ಬೆಳೆಸುತ್ತಿದ್ದರೂ, ರಾಹುಲ್ ಅವಕಾಶ ಸಿಕ್ಕಾಗಲೆಲ್ಲಾ ಚೆಂಡು ಬೌಂಡರಿ ಗೆರೆ ದಾಟಿಸುತ್ತಿದ್ದರು. ಮೊನ್ನೆಯ ಪಂದ್ಯದಲ್ಲೂ ಮೊದಲ ಇನಿಂಗ್ಸ್ ನಲ್ಲಿ ಅರ್ಧಶತಕ ಗಳಿಸಿದ್ದರು. ಸಾಲದ್ದಕ್ಕೆ ಇಂದು ತವರಿನಲ್ಲಿ ಆಡುತ್ತಿರುವ ಹುಮ್ಮಸ್ಸು ಬೇರೆ.
ಬಹುಶಃ ಭೋಜನ ವಿರಾಮದ ನಂತರ ಕೊಹ್ಲಿ ಶೋಗೆ ಪೂಜಾರ ವೇದಿಕೆ ಒದಗಿಸಿಕೊಟ್ಟರೇನೋ. ಅದಕ್ಕೆ ಕೊಹ್ಲಿ ಗಟ್ಟಿ ನಿಲ್ಲಬೇಕಷ್ಟೇ. ಆಗಲೇ ಭಾರತಕ್ಕೂ ಉಳಿಗಾಲ. ಇಲ್ಲದಿದ್ದರೆ, ಕೊಹ್ಲಿ ಮಾಡಿದ ಪ್ರಾಮಿಸ್ ಹುಸಿಯಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.