ರಾಜ್ ಕೋಟ್: ಕರ್ನಾಟಕ ಮತ್ತು ಸೌರಾಷ್ಟ್ರ ತಂಡಗಳ ನಡುವೆ ರಾಜ್ ಕೋಟ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯ ಇಂದು ಹಲವು ನಾಟಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಯಿತು. ಆದರೆ ಅಂತಿಮವಾಗಿ ಕರ್ನಾಟಕ 87 ರನ್ ಗಳಿಂದ ಸೋಲನುಭವಿಸಿತು.
ದ್ವಿತೀಯ ಇನಿಂಗ್ಸ್ ನಲ್ಲಿ ಸೌರಾಷ್ಟ್ರವನ್ನು ಕೇವಲ 79 ರನ್ ಗಳಿಗೆ ಆಲೌಟ್ ಮಾಡಿದ ಕರ್ನಾಟಕ ಹುಡುಗರ ಕರಾಮತ್ತು ನೋಡಿ ಇಂದೇ ರಾಜ್ಯದ ತಂಡ ಪಂದ್ಯ ಗೆಲ್ಲುತ್ತದೇನೋ ಎಂಬ ಆಸೆ ಚಿಗುರಿತ್ತು. ಕರುಣ್ ನಾಯರ್ ಮತ್ತು ಶ್ರೇಯಸ್ ಗೋಪಾಲ್ 63 ರನ್ ಗಳ ಜತೆಯಾಟವಾಡಿ ಆ ಆಸೆಗೆ ನೀರೆರದರು ಕೂಡಾ. ಆದರೆ ಗೆಲುವಿಗೆ ಬೇಕಾಗಿದ್ದ ಕೇವಲ 179 ರನ್ ಗಳ ಗುರಿ ಬೆನ್ನತ್ತಿದ ಕರ್ನಾಟಕದ ಬ್ಯಾಟ್ಸ್ ಮನ್ ಗಳು ಈ ಜೋಡಿ ಮುರಿದುಬೀಳುತ್ತಿದ್ದಂತೆ ಸಂಪೂರ್ಣವಾಗಿ ಪತನದ ಹಾದಿ ಹಿಡಿಯಿತು.
ಸೌರಾಷ್ಟ್ರದ ಧರ್ಮೇಂದ್ರಸಿಂಹ ಜಡೇಜ ಮತ್ತು ಕಮಲೇಶ್ ಮಕ್ವಾನ ಜೋಡಿಯ ಬೌಲಿಂಗ್ ಗೆ ತತ್ತರಿಸಿದ ಕರ್ನಾಟಕ ಕೇವಲ 91 ರನ್ ಗಳಿಗೆ ಆಲೌಟ್ ಆಯಿತು. ಅದರಲ್ಲೂ ನಾಲ್ವರು ಬ್ಯಾಟ್ಸ್ ಮನ್ ಗಳು ಸತತವಾಗಿ ಶೂನ್ಯಕ್ಕೆ ಔಟಾಗಿದ್ದು ವಿಪರ್ಯಾಸ. ಆರಂಭಿಕ ರವಿಕಾಂತ್ ಸಮರ್ಥ್ ಸೇರಿದಂತೆ ಒಟ್ಟು ಐವರು ಬ್ಯಾಟ್ಸ್ ಮನ್ ಗಳು ಶೂನ್ಯ ಸಂಪಾದಿಸಿದರು.
ಅತ್ತ ಸೌರಾಷ್ಟ್ರದ ಖುಷಿಗೆ ಮಿತಿಯೇ ಇರಲಿಲ್ಲ. ಹೇಳಿ ಕೇಳಿ ಇದು ನಾಯಕ ಜಯದೇವ್ ಶಾಗೆ ವಿದಾಯದ ಪಂದ್ಯವಾಗಿತ್ತು. ಅದನ್ನು ಸೌರಾಷ್ಟ್ರ ಗೆಲುವಿನ ಮೂಲಕವೇ ವಿದಾಯ ನೀಡಿತು. ಅಂತಿಮವಾಗಿ ಜಡೇಜಾ 4 ವಿಕೆಟ್ ಕಿತ್ತರೆ ಕಮಲೇಶ್ 5 ವಿಕೆಟ್ ಕಬಳಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ