ಮುಂಬೈ: ಮಾತು ಕೇಳದ ಕ್ರಿಕೆಟಿಗರಾದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಗೆ ವಾರ್ಷಿಕ ಗುತ್ತಿಗೆಯಿಂದ ಕೈ ಬಿಟ್ಟು ಬಿಸಿಸಿಐ ಸರಿಯಾಗಿಯೇ ಬಿಸಿ ಮುಟ್ಟಿಸಿದೆ. ಇದಕ್ಕೆ ಮೊದಲು ಇಬ್ಬರಿಗೂ ಖುದ್ದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕರೆ ಮಾಡಿ ಬಿಸಿ ಮುಟ್ಟಿಸಿದ್ದಾರೆ ಎನ್ನಲಾಗಿದೆ.
ಟೀಂ ಇಂಡಿಯಾದಲ್ಲಿ ಇತ್ತೀಚೆಗೆ ಯುವ ಕ್ರಿಕೆಟಿಗರು ಟೆಸ್ಟ್ ಮಾದರಿ ಆಡಲು ಹಿಂದೇಟು ಹಾಕುತ್ತಿರುವ ಬಗ್ಗೆ ಅಪವಾದಗಳು ಕೇಳಿಬಂದಿವೆ. ಸ್ವತಃ ರೋಹಿತ್ ಶರ್ಮಾ ಇತ್ತೀಚೆಗೆ ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೆ ಮೊದಲು ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಕುಂಟು ನೆಪ ಹೇಳಿ ತಂಡದಿಂದ ಹೊರ ನಡೆದಿದ್ದು ಕಾರಣವಾಗಿತ್ತು.
ಇಶಾನ್ ಕಿಶನ್ ಗೆ ತಂಡಕ್ಕೆ ಮರಳಬೇಕಾದರೆ ರಣಜಿ ಆಡಲು ಸೂಚಿಸಲಾಗಿತ್ತು. ಆದರೂ ಕೇರ್ ಮಾಡದ ಅವರು ಐಪಿಎಲ್ ತಯಾರಿ ಶುರು ಮಾಡಿಕೊಂಡಿದ್ದರು. ಇನ್ನೊಂದೆಡೆ ಶ್ರೇಯಸ್ ಅಯ್ಯರ್ ಇಲ್ಲದ ಗಾಯದ ನೆಪ ಹೇಳಿ ರಣಜಿ ಪಂದ್ಯ ತಪ್ಪಿಸಿಕೊಳ್ಳಲು ನೋಡಿದ್ದರು. ಇವರಿಬ್ಬರ ಕಳ್ಳಾಟ ಬಯಲಾಗುತ್ತಿದ್ದಂತೇ ಬಿಸಿಸಿಐ ಗರಂ ಆಗಿತ್ತು.
ಇದೇ ಕಾರಣಕ್ಕೆ ಇಬ್ಬರನ್ನೂ ಬಿಸಿಸಿಐ ವಾರ್ಷಿಕ ಗುತ್ತಿಗೆಯಿಂದ ಹೊರಹಾಕಲಾಗಿತ್ತು. ಇದರ ಜೊತೆಗೆ ಇಬ್ಬರೂ ಆಟಗಾರರಿಗೆ ಖುದ್ದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರೇ ಫೋನ್ ಕರೆ ಮಾಡಿ ವಾರ್ನ್ ಮಾಡಿದ್ದಾರಂತೆ. ಆಯ್ಕೆಗಾರರು, ಟೀಂ ಇಂಡಿಯಾ ಕೋಚ್ ಅಥವಾ ನಾಯಕ ದೇಶೀಯ ಕ್ರಿಕೆಟ್ ಅಥವಾ ರೆಡ್ ಬಾಲ್ ಕ್ರಿಕೆಟ್ ಆಡಲು ಸೂಚಿಸಿದರೆ ಅದನ್ನು ಪಾಲಿಸಬೇಕು ಎಂದು ಸ್ವತಃ ಜಯ್ ಶಾ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಭಾರತ ತಂಡದಲ್ಲಿ ಅವಕಾಶ ಸಿಗಬೇಕಾದರೆ ದೇಶೀಯ ಕ್ರಿಕೆಟ್ ನಲ್ಲಿ ಆಡಲೇಬೇಕು ಎಂಬ ನಿಯಮ ಪಾಲಿಸಲೇಬೇಕಿದೆ.