ಚೆನ್ನೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಸದಾ ತಮ್ಮ ಸಂದರ್ಶನಗಳಲ್ಲಿ ಧೋನಿ ಬಗ್ಗೆ ಕಿಡಿ ಕಾರುತ್ತಿರುತ್ತಾರೆ. ಆದರೆ ನಿನ್ನೆಯ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ಬಳಿಕ ಕೆಕೆಆರ್ ಮೆಂಟರ್ ಗಂಭೀರ್ ಧೋನಿ ಜೊತೆ ನಡೆದುಕೊಂಡ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
2011 ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಗೆಲುವಿಗೆ ಧೋನಿ ಒಬ್ಬರೇ ಕಾರಣರಲ್ಲ ಎಂದು ಗಂಭೀರ್ ಪದೇ ಪದೇ ಕಿಡಿ ಕಾರುತ್ತಲೇ ಇದ್ದರು. ಆದರೆ ಚೆನ್ನೈ ವಿರುದ್ಧದ ಪಂದ್ಯಕ್ಕೆ ಮುನ್ನ ಗಂಭೀರ್, ಧೋನಿ ಟೀಂ ಇಂಡಿಯಾ ಕಂಡ ಶ್ರೇಷ್ಠ ನಾಯಕ ಎಂದು ಹೊಗಳಿ ಎಲ್ಲರ ಅಚ್ಚರಿಗೆ ಕಾರಣರಾಗಿದ್ದರು.
ಇದು ಇಷ್ಟಕ್ಕೇ ನಿಂತಿಲ್ಲ. ನಿನ್ನೆಯ ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಆಟಗಾರರು ಪರಸ್ಪರ ಕೈಕುಲುಕಲು ಬಂದಾಗ ಗಂಭೀರ್, ಎದುರಾಳಿ ನಾಯಕ ಧೋನಿಯನ್ನು ತಬ್ಬಿಕೊಂಡು ಅಭಿನಂದನೆ ಸಲ್ಲಿಸಿದ್ದಾರೆ. ಇದು ಎಲ್ಲರ ಗಮನ ಸೆಳೆದಿದೆ.
ಗಂಭೀರ್ ಗೆ ಮೈದಾನದಲ್ಲಿ ಮತ್ತೊಬ್ಬ ಎದುರಾಳಿ ಎಂದರೆ ವಿರಾಟ್ ಕೊಹ್ಲಿ. ಇಬ್ಬರ ನಡುವೆ ಆಗಾಗ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ಆದರೆ ಕಳೆದ ಆರ್ ಸಿಬಿ ವಿರುದ್ಧದ ಪಂದ್ಯದ ಬಳಿಕ ಗಂಭೀರ್ ತಾವೇ ಮುಂದಾಗಿ ಕೊಹ್ಲಿಯನ್ನು ತಬ್ಬಿಕೊಂಡು ಮಾತನಾಡಿಸಿ ಎಲ್ಲರ ಗಮನ ಸೆಳೆದಿದ್ದರು. ಈ ಮೂಲಕ ತಾವು ಈ ಬಾರಿ ಕೂಲ್ ಆಗಿರುವುದಾಗಿ ಸಂದೇಶ ರವಾನಿಸಿದ್ದಾರೆ.