ಗುವಾಹಟಿ: ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೇ ರದ್ದಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮಳೆಯ ನಂತರ ಮೈದಾನ ನಿಭಾಯಿಸಲು ಸೂಕ್ತ ವ್ಯವಸ್ಥೆಯಿಲ್ಲದೇ ಸಿಬ್ಬಂದಿ ಹೆಣಗಾಡಿದ ಪರಿಸ್ಥಿತಿ ಎದುರಾಯಿತು.
ಪಂದ್ಯಾರಂಭಕ್ಕೂ ಕೆಲವೇ ಕ್ಷಣಗಳ ಮೊದಲು ತುಂತುರು ಮಳೆ ಆರಂಭವಾಯಿತು. ಹಾಗಿದ್ದರೂ ಮಳೆ ನಿಂತು ಪಂದ್ಯ ನಡೆಯುತ್ತದೆ ಎಂಬ ಆಶಾಭಾವನೆ ಅಭಿಮಾನಿಗಳಲ್ಲಿತ್ತು. ಈ ನಡುವೆ ಟಾಸ್ ನಡೆದು ಭಾರತ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತ್ತು.
ಆದರೆ ಇನ್ನೇನು ಆಟ ಆರಂಭವಾಗಬೇಕೆನ್ನುವಷ್ಟರಲ್ಲಿ ಮಳೆ ಜೋರಾಗಿ ಸುರಿದು ಪಂದ್ಯ ಒಂದೂ ಎಸೆತ ಕಾಣದೇ ರದ್ದಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಮೈದಾನ ಒದ್ದೆಯಾಗದಂತೆ ಕವರ್ ಸರಿಯಾಗಿ ಹಾಕಲಾಗದೇ ಸಿಬ್ಬಂದಿಗಳು ಒದ್ದಾಡಿದರು. ಇದರಿಂದಾಗಿ ಪಿಚ್ ಸಂಪೂರ್ಣ ಒದ್ದೆಯಾಗಿದ್ದಲ್ಲದೆ ಕೆಲವೆಡೆ ಕುಳಿಗಳು ಎದ್ದಿದ್ದವು. ವಿಪರ್ಯಾಸವೆಂದರೆ ಇಸ್ತ್ರಿ ಬಾಕ್ಸ್, ವ್ಯಾಕ್ಯೂಮ್ ಕ್ಲೀನರ್ ಹಿಡಿದು ಮೈದಾನ ಒಣಗಿಸಲು ಸಿಬ್ಬಂದಿ ಹರಸಾಹಸ ಪಟ್ಟಿದ್ದು ಕಂಡುಬಂತು. ಇಂತಹದ್ದೊಂದು ಹೀನಾಯ ಸ್ಥಿತಿ ಬಹುಶಃ ಯಾವ ಮೈದಾನದಲ್ಲೂ ಕಂಡಿರಲಿಲ್ಲ. ಇದರಿಂದಾಗಿ ಪಂದ್ಯ ಸಂಪೂರ್ಣವಾಗಿ ರದ್ದಾಯಿತು.