ಓವಲ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ಬೌಲರ್ ಗಳ ಕಳಪೆ ಪ್ರದರ್ಶನದಿಂದಾಗಿ ಟೀಂ ಇಂಡಿಯಾ 5 ವಿಕೆಟ್ ಗಳಿಂದ ಸೋತಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ರಿಂಕು ಸಿಂಗ್, ಸೂರ್ಯಕುಮಾರ್ ಯಾದವ್ ಅರ್ಧಶತಕದ ನೆರವಿನಿಂದ 19.3 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು. ಮಳೆ ಸುರಿದಿದ್ದರಿಂದ ಕೆಲವು ಕಾಲ ಆಟ ಸ್ಥಗಿತಗೊಳಿಸಲಾಯಿತು.
ಮತ್ತೆ ಪಂದ್ಯ ಆರಂಭವಾದಾಗ ಆಫ್ರಿಕಾಗೆ 15 ಓವರ್ ಗಳಲ್ಲಿ 152 ರನ್ ಗಳಿಸಬೇಕಿತ್ತು. ಆದರೆ ಭಾರತೀಯ ಬೌಲರ್ ಗಳ ನಿಯಂತ್ರಣವಿಲ್ಲದ ದಾಳಿಯಿಂದಾಗಿ ಆಫ್ರಿಕಾ 13.5 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿತು. ಅರ್ಷ್ ದೀಪ್ ಸಿಂಗ್ 2 ಓವರ್ ಗಳಲ್ಲಿ ಬರೋಬ್ಬರಿ 31 ರನ್, ಅನುಭವಿ ಬೌಲರ್ ರವೀಂದ್ರ ಜಡೇಜಾ 2.5 ಓವರ್ ಗಳಲ್ಲಿ 28 ರನ್ ನೀಡಿದರು! ಇಬ್ಬರೂ ವಿಕೆಟ್ ಕೀಳಲು ವಿಫಲರಾದರು.
ಮುಕೇಶ್ ಕುಮಾರ್ 2, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ 1 ವಿಕೆಟ್ ಕಬಳಿಸಿದರು. ಇದರೊಂದಿಗೆ ಟೀಂ ಇಂಡಿಯಾ ಸರಣಿಯಲ್ಲಿ 1-0 ಅಂತರದಿಂದ ಹಿನ್ನಡೆ ಅನುಭವಿಸಿತು. ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿಯಿದ್ದು, ಸರಣಿ ಉಳಿಸಿಕೊಳ್ಳಲು ಟೀಂ ಇಂಡಿಯಾ ಈ ಪಂದ್ಯ ಗೆಲ್ಲಲೇಬೇಕಿದೆ.