ಅಹಮ್ಮದಾಬಾದ್: ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ ಗಳು ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್ ಆಗಿದೆ.
ಆನ್ ಲೈನ್ ನಲ್ಲಿ ಟಿಕೆಟ್ ಖರೀದಿಸಲು ಬುಕ್ ಮೈ ಶೋನಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ನಿನ್ನೆ ಸಂಜೆ 6 ಗಂಟೆಯಿಂದ ಅಕ್ಟೋಬರ್ 14 ರಂದು ಅಹಮ್ಮದಾಬಾದ್ ನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ಹೈ ವೋಲ್ಟೇಜ್ ಪಂದ್ಯದ ಟಿಕೆಟ್ ಖರೀದಿಗೆ ಬುಕ್ ಮೈ ಶೋನಲ್ಲಿ ಅವಕಾಶ ಕಲ್ಪಿಸಲಾಗಿತ್ತು.
ಹೇಳಿ ಕೇಳಿ, ಭಾರತ-ಪಾಕಿಸ್ತಾನ ಪಂದ್ಯ. ಹೀಗಾಗಿ ನಿರೀಕ್ಷೆಯಂತೇ ಜನ ಪೈಪೋಟಿಗೆ ಬಿದ್ದು ಟಿಕೆಟ್ ಖರೀದಿಗೆ ಮುಂದಾಗಿದ್ದರು. ಆದರೆ ಬುಕ್ ಮೈ ಶೋನಲ್ಲಿ ಟಿಕೆಟ್ ಓಪನ್ ಆದ ಕೆಲವೇ ಕ್ಷಣಗಳಲ್ಲಿ ಸರ್ವರ್ ಸಮಸ್ಯೆಯಿಂದ ಹಲವರಿಗೆ ಟಿಕೆಟ್ ಖರೀದಿ ಸಾಧ್ಯವಾಗಿಲ್ಲ. ಈ ನಡುವೆ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ. ಇದರ ಬೆನ್ನಲ್ಲೇ ಬುಕ್ ಮೈ ಶೋ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ವರ್ ಸಮಸ್ಯೆಯಾಗಿದ್ದರೂ ಟಿಕೆಟ್ ಸೋಲ್ಡ್ ಔಟ್ ಆಗಿದ್ದು ಹೇಗೆ ಎಂದು ಹಲವರು ಪ್ರಶ್ನಿಸಿದ್ದಾರೆ. ಇದರಲ್ಲಿ ಏನೋ ಗೋಲ್ ಮಾಲ್ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಬುಕ್ ಮೈ ಶೋ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇಂತಹ ಮಹತ್ವದ ಪಂದ್ಯವಿದ್ದಾಗ ಜನ ಟಿಕೆಟ್ ಗೆ ಮುಗಿಬೀಳುತ್ತಾರೆ ಎಂದು ಮೊದಲೇ ಅಂದಾಜಿದ್ದರೂ ಸೂಕ್ತ ವ್ಯವಸ್ಥೆ ಮಾಡಲಿಲ್ಲ. ಇಂತಹ ಕಳಪೆ ಬುಕ್ ಮೈ ಶೋಗೆ ಟಿಕೆಟ್ ಬುಕ್ ಮಾಡುವ ಅವಕಾಶ ನೀಡಿದ್ದಕ್ಕೆ ಬಿಸಿಸಿಐ, ಐಸಿಸಿಗೆ ಜನ ಹಿಡಿಶಾಪ ಹಾಕಿದ್ದಾರೆ.