ಹೈದರಾಬಾದ್: ಇದು ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ದಿನದ ಆಟದ ವೇಳೆ ನಡೆದ ಡ್ರಾಮಾ. ಬಾಂಗ್ಲಾ ದುರ್ಬಲ ತಂಡ ಎನ್ನುವುದೇನೋ ಗೊತ್ತು, ಆದರೆ ಇಬ್ಬರೂ ಬ್ಯಾಟ್ಸ್ ಮನ್ ಗಳು ಒಂದೇ ತುದಿಯಲ್ಲಿದ್ದರೂ ಔಟ್ ಮಾಡಲಾಗದಷ್ಟಾ ಎಂದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತಾಯಿತು.
ಇದು ನಡೆದಿದ್ದ 19 ನೇ ಓವರ್ ನಲ್ಲಿ. ಬಾಂಗ್ಲಾ ಬೌಲರ್ ಮೆಹದಿ ಹಸನ್ ಬೌಲಿಂಗ್ ನಲ್ಲಿ ಚೇತೇಶ್ವರ ಪೂಜಾರ ಮಿಡ್ ಆಫ್ ಕಡೆಗೆ ತಳ್ಳಿ ಸಿಂಗಲ್ ಕದಿಯಲು ಹೊರಟಿದ್ದು. ಅತ್ತ ಮುರಳಿ ವಿಜಯ್ ಪಿಚ್ ನ ಅರ್ಧ ಭಾಗಕ್ಕೆ ತಲುಪಿದ್ದರು. ಆದರೆ ಚೆಂಡು ಫೀಲ್ಡರ್ ಕೈಯಲ್ಲಿರುವುದು ನೋಡಿ ಪೂಜಾರ ವಾಪಸ್ ಕ್ರೀಸ್ ಗೆ ಮರಳಲು ನೋಡಿದರೆ ವಿಜಯ್ ಕೂಡಾ ಒಂದೇ ತುದಿಯಲ್ಲಿರುವುದು ತಿಳಿಯಿತು.
ಅಪಾಯದ ಅರಿವಾದ ತಕ್ಷಣ ನಾನ್ ಸ್ಟ್ರೈಕರ್ ಎಂಡ್ ಗೆ ವಿಜಯ್ ಓಡಿದರೂ, ಫೀಲ್ಡರ್ ಗೆ ವಿಕೆಟ್ ಗೆ ಬಾಲ್ ತಾಗಿಸಲು ಬೇಕಾದಷ್ಟು ಸಮಯವಿತ್ತು. ಆದರೂ, ಹಸನ್ ತಪ್ಪು ಮಾಡಿದರು. ಸರಿಯಾಗಿ ಬಾಲ್ ಹಿಡಿಯದೆ, ವಿಕೆಟ್ ಗೂ ಬಾಲ್ ತಾಕಿಸದೆ ರನೌಟ್ ಚಾನ್ಸ್ ಮಿಸ್ ಮಾಡಿದರು. ಹಿಂದೊಮ್ಮೆ ಇದೇ ಬಾಂಗ್ಲಾದೇಶದ ವಿರುದ್ಧ ಸಚಿನ್ ತೆಂಡುಲ್ಕರ್ ಮತ್ತು ಅನಿಲ್ ಕುಂಬ್ಳೆ ಕೂಡಾ ಹೀಗೇ ಎಡವಟ್ಟು ಮಾಡಿಕೊಂಡು ಬಚವಾಗಿದ್ದರು.
ದಿನದ ಆರಂಭದಲ್ಲೇ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ಮತ್ತೊಂದು ಆಘಾತ ನೀಡುವ ಅವಕಾಶವನ್ನು ಬಾಂಗ್ಲಾ ಕೈ ಚೆಲ್ಲಿತು. ಇದನ್ನು ಹೊರತುಪಡಿಸಿದರೆ ಬಾಂಗ್ಲಾ ಬೌಲರ್ ಗಳು ಭಾರತೀಯ ಬ್ಯಾಟ್ಸ್ ಮನ್ ಗಳ ಮೇಲೆ ದೊಡ್ಡ ಪರಿಣಾಮ ಬೀರಲಿಲ್ಲ. ಆರಂಭದ 10 ಓವರ್ ಗಳಲ್ಲಿ ವೇಗಿಗಳು ಕೊಂಚ ಪರಿಣಾಮ ಬೀರಿದರು. ಆದರೆ ಬಿಸಿಲು ಏರುತ್ತಿದ್ದಂತೆ ಪೂಜಾರ ಮತ್ತು ವಿಜಯ್ ತಮ್ಮ ಮೆಚ್ಚಿನ ಶಾಟ್ ಹೊಡೆದು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.
ಊಟದ ವಿರಾಮದ ವೇಳೆಗೆ ಟೀಂ ಇಂಡಿಯಾ ಏಕಮಾತ್ರ ವಿಕೆಟ್ ಕಳೆದುಕೊಂಡು 86 ರನ್ ಗಳಿಸಿದೆ. ವಿಜಯ್ 45 ರನ್ ಗಳಿಸಿ ಅರ್ಧಶತಕಕ್ಕೆ ಹತ್ತಿರವಾಗಿದ್ದರೆ, ಪೂಜಾರ 39 ರನ್ ಗಳಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ