ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನವಂಬರ್ 22 ರಂದು ನಡೆಯಲಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯದ ಉದ್ದೇಶ ಜನರನ್ನು ಟೆಸ್ಟ್ ಕ್ರಿಕೆಟ್ ನತ್ತ ಹೆಚ್ಚು ಆಕರ್ಷಿತರಾಗುವಂತೆ ಮಾಡುವುದು.
ಆ ಉದ್ದೇಶದಲ್ಲಿ ಬಿಸಿಸಿಐ ಬಹುತೇಕ ಯಶಸ್ವಿಯಾಗಿದೆ. ಈ ಪಂದ್ಯ ಭಾರತದ ಕ್ರಿಕೆಟ್ ಕಾಶಿ ಎಂದೇ ಕರೆಯಿಸಿಕೊಳ್ಳುವ ಕೋಲ್ಕೊತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿದ್ದು, ಈಗಾಗಲೇ ಟಿಕೆಟ್ ಗಳು ಬಹುತೇಕ ಬಿಕರಿಯಾಗಿವೆ ಎಂಬ ಸುದ್ದಿ ಬಂದಿದೆ.
ಮೂಲಗಳ ಪ್ರಕಾರ 50000 ಪ್ರೇಕ್ಷಕರ ಆಸನದ ವ್ಯವಸ್ಥೆ ಹೊಂದಿರುವ ಈಡನ್ ಮೈದಾನದ ಟಿಕೆಟ್ ಗಳು ಈಗಾಗಲೇ ಸೇಲ್ ಆಗಿವೆ. ಅದರಲ್ಲೂ ಮೊದಲ ಮೂರು ದಿನಗಳ ಆಟದ ವೀಕ್ಷಣೆಗೆ ವೀಕ್ಷಕರು ಹೆಚ್ಚಿನ ಆಸಕ್ತಿ ತೋರಿದ್ದು, ಈ ದಿನಗಳ ಟಿಕೆಟ್ ಹೆಚ್ಚು ಸೇಲ್ ಆಗಿವೆ ಎನ್ನಲಾಗಿದೆ. ಮೊದಲ ಮೂರು ದಿನ ಹಲವು ಗಣ್ಯರು, ಮಾಜಿ ಕ್ರಿಕೆಟ್ ದಿಗ್ಗಜರು ಮೈದಾನದಲ್ಲಿ ಉಪಸ್ಥಿತರಿರಲಿದ್ದಾರೆ. ಈ ದಿನಗಳಲ್ಲಿ ಬಿಸಿಸಿಐ ಭಾರತ-ಬಾಂಗ್ಲಾ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಿದ ಕ್ರಿಕೆಟಿಗರನ್ನು, ಟೆಸ್ಟ್ ತಂಡದ ಮಾಜಿ ನಾಯಕರಿಗೂ ಗೌರವ ಸಲ್ಲಿಸಲು ಸಿದ್ಧತೆ ನಡೆಸಿದೆ. ಹೀಗಾಗಿ ಈ ಟೆಸ್ಟ್ ಪಂದ್ಯದತ್ತ ಅಭಿಮಾನಿಗಳ ಆಸಕ್ತಿ ಹೆಚ್ಚಿದೆ.