ಮೆಲ್ಬೋರ್ನ್: ಇಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಒಂದಲ್ಲ, ಐದು ದಾಖಲೆ ಮುರಿಯುವ ಅವಕಾಶ ಎದುರಾಗಿದೆ.
ಐಸಿಸಿ ರ್ಯಾಂಕಿಂಗ್ ನಲ್ಲಿ ನಂ.1 ಸ್ಥಾನದಲ್ಲಿರುವ ಕೊಹ್ಲಿ ಒಂದು ವರ್ಷದಲ್ಲಿ ವಿದೇಶಗಳಲ್ಲಿ ಅತೀ ಹೆಚ್ಚು ರನ್ ಗಳಿಸಿದ ರಾಹುಲ್ ದ್ರಾವಿಡ್ ದಾಖಲೆ ಮುರಿಯಲು 82 ರನ್ ಬೇಕು. ದ್ರಾವಿಡ್ ಒಂದೇ ಋತುವಿನಲ್ಲಿ 1137 ರನ್ ಗಳಿಸಿ ದಾಖಲೆ ಮಾಡಿದ್ದರು.
ಎರಡೂ ಇನಿಂಗ್ಸ್ ಗಳಲ್ಲಿ ಒಟ್ಟಾಗಿ 156 ರನ್ ಗಳಿಸಿದರೆ ಕೊಹ್ಲಿ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ವಿದೇಶಗಳಲ್ಲಿ ನಾಯಕನಾಗಿ ಅತೀ ಹೆಚ್ಚು ರನ್ ಗಳಿಸಿದ ದ. ಆಫ್ರಿಕಾದ ಗ್ರೇಮ್ ಸ್ಮಿತ್ ದಾಖಲೆ ಮುರಿಯಲಿದ್ದಾರೆ. ಗ್ರೇಮ್ 1212 ರನ್ ಗಳಿಸಿದ್ದರು.
ಈ ಪಂದ್ಯದಲ್ಲಿ ಕೊಹ್ಲಿ ಮತ್ತೊಂದು ಶತಕ ಗಳಿಸಿದರೆ ಅವರ ಟೆಸ್ಟ್ ಶತಕಗಳ ಸಂಖ್ಯೆ 27 ಕ್ಕೇರಲಿದ್ದು, ಶತಕಗಳ ಪಟ್ಟಿಯಲ್ಲಿ ಗ್ಯಾರಿ ಸೋಬರ್ಸ್ ದಾಖಲೆ ಸರಿಗಟ್ಟಲಿದ್ದಾರೆ.
ಅಷ್ಟೇ ಅಲ್ಲ, ಇಲ್ಲಿ ಶತಕ ಗಳಿಸಿದರೆ ಒಂದೇ ವರ್ಷ 12 ಅಂತರಾಷ್ಟ್ರೀಯ ಶತಕ ಗಳಿಸಿದ ಸಚಿನ್ ತೆಂಡುಲ್ಕರ್ ದಾಖಲೆ ಸರಿಗಟ್ಟಲಿದ್ದಾರೆ. ತೆಂಡುಲ್ಕರ್ 1998 ರಲ್ಲಿ ಈ ದಾಖಲೆ ಮಾಡಿದ್ದರು. ಅಷ್ಟೇ ಅಲ್ಲ, ಅಂತಿಮವಾಗಿ, ಕೊಹ್ಲಿ ಇಲ್ಲಿ ಶತಕ ಗಳಿಸಿದರೆ ಆಸ್ಟ್ರೇಲಿಯಾ ನೆಲದಲ್ಲಿ ನಾಯಕನಾಗಿ ಅತೀ ಹೆಚ್ಚು ಟೆಸ್ಟ್ ಶತಕ ಗಳಿಸಿದ ವಿಂಡೀಸ್ ನ ಕ್ಲೈವ್ ಲಾಯ್ಡ್ ದಾಖಲೆ ಮುರಿಯಲಿದ್ದಾರೆ. ಸದ್ಯಕ್ಕೆ ಇಬ್ಬರೂ ನಾಲ್ಕು ಶತಕ ಗಳಿಸಿ ಅಗ್ರ ಸ್ಥಾನದಲ್ಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ