ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ದ್ವಿತೀಯ ಟಿ20 ಪಂದ್ಯ ನಡೆಯಲಿದ್ದು, ಮೊದಲ ಪಂದ್ಯವನ್ನು ಕೊನೆಯ ಕ್ಷಣದಲ್ಲಿ ಸೋತ ಟೀಂ ಇಂಡಿಯಾ ಈ ಪಂದ್ಯಕ್ಕೆ ಕೆಲವು ಬದಲಾವಣೆ ಮಾಡುವ ಸಾಧ್ಯತೆಯಿದೆ.
ಮೊದಲ ಪಂದ್ಯದಲ್ಲಿ ಭಾರತದ ಬೌಲಿಂಗ್ ಸಂಪೂರ್ಣ ಹಳಿ ತಪ್ಪಿತ್ತು. ಹೀಗಾಗಿ ಬೌಲಿಂಗ್ ವಿಭಾಗದಲ್ಲಿ ದುಬಾರಿಯಾಗಿದ್ದ ಕೃನಾಲ್ ಪಾಂಡ್ಯ ಸ್ಥಾನಕ್ಕೆ ಯಜುವೇಂದ್ರ ಚಾಹಲ್ ಆಗಮನವಾಗುವ ಸಾಧ್ಯತೆಯಿದೆ. ಇನ್ನು, ವಿಕೆಟ್ ಕಿತ್ತರೂ ದುಬಾರಿಯೆನಿಸಿದ ಯುವ ವೇಗಿ ಖಲೀಲ್ ಅಹಮ್ಮದ್ ಕೂಡಾ ಸ್ಥಾನ ಕಳೆದುಕೊಂಡರೆ ಅಚ್ಚರಿಯಿಲ್ಲ.
ಬ್ಯಾಟಿಂಗ್ ವಿಭಾಗದಲ್ಲಿ ಆಟಗಾರರ ಬದಲಾವಣೆಯಾಗದಿದ್ದರೂ ಕಳೆದ ಪಂದ್ಯದಲ್ಲಿ ಮಾಡಿದಂತೆ ಕೊಹ್ಲಿ ನಾಲ್ಕನೇ ಕ್ರಮಾಂಕದ ಬದಲು ತಮ್ಮ ಮೆಚ್ಚಿನ ಮೂರನೇ ಕ್ರಮಾಂಕದಲ್ಲೇ ಆಡುವ ಸಾಧ್ಯತೆಯಿದೆ. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಯೋಗ ಮಾಡಲು ಹೋಗಿ ಟೀಂ ಇಂಡಿಯಾ ಕೈ ಸುಟ್ಟುಕೊಂಡಿತ್ತು.
ಗಬ್ಬಾ ಮೈದಾನದಂತೆ ಇಲ್ಲಿಯೂ ಮಳೆಯ ಸೂಚನೆ ಇದ್ದು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಉತ್ತಮ ರನ್ ಕಲೆ ಹಾಕುವುದೇ ಜಾಣತನ. ಒಂದು ವೇಳೆ ಈ ಪಂದ್ಯ ಸೋತರೆ ಭಾರತ ಸರಣಿ ಸೋತಂತೆ. ಅದರೊಂದಿಗೆ ಟಿ20 ಮಾದರಿಯಲ್ಲಿ ಸತತ ಏಳು ಸರಣಿ ಗೆದ್ದ ದಾಖಲೆಯ ಸರಪಳಿ ಮುರಿದು ಬೀಳಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.