Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

IND vs ENG: ಟೀಂ ಇಂಡಿಯಾ ಆಡುವ ಬಳಗ ಹೇಗಿರಲಿದೆ?

Rohit Sharma-Shubman Gill

Krishnaveni K

ಹೈದರಾಬಾದ್ , ಗುರುವಾರ, 25 ಜನವರಿ 2024 (08:28 IST)
ಹೈದರಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ಆರಂಭವಾಗಲಿದೆ.
 

ಈ ಪಂದ್ಯಕ್ಕೆ ಟೀಂ ಇಂಡಿಯಾ ಆಡುವ ಬಳಗ ಹೇಗಿರಬಹುದು ಎಂಬ ಕುತೂಹಲ ಎಲ್ಲರಲ್ಲಿದೆ. ವಿರಾಟ್ ಕೊಹ್ಲಿ ಅಲಭ್ಯರಾಗಿರುವುದರಿಂದ ತಂಡಕ್ಕೆ ಪ್ರಬಲ ಬ್ಯಾಟಿಗನೊಬ್ಬನ ಅಗತ್ಯವಿದೆ. ಹೀಗಾದಲ್ಲಿ ಅವರ ಸ್ಥಾನವನ್ನು ಕೆಎಲ್ ರಾಹುಲ್ ತುಂಬಬೇಕಾಗುತ್ತದೆ.

ಕೆಎಲ್ ರಾಹುಲ್ ಈ ಹಿಂದೆ ಆಫ್ರಿಕಾ ಸರಣಿಯಲ್ಲಿ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಿದ್ದರು. ಆದರೆ ಇದೀಗ ಭವಿಷ್ಯದ ದೃಷ್ಟಿಯಿಂದ ಸುದೀರ್ಘ ಮಾದರಿಯಲ್ಲಿ ರಾಹುಲ್ ಗೆ ವಿಕೆಟ್ ಕೀಪಿಂಗ್ ನ ಹೆಚ್ಚುವರಿ ಹೊಣೆ ಬೇಡ ಎಂದು ತಂಡ ನಿರ್ಧರಿಸಿದೆ. ಈ ಕಾರಣಕ್ಕೆ ಅವರನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಕೇವಲ ಬ್ಯಾಟಿಗನಾಗಿ ಕಾಣಲು ಮ್ಯಾನೇಜ್ ಮೆಂಟ್ ನಿರ್ಧರಿಸಿತ್ತು. ಒಂದು ವೇಳೆ ಕೊಹ್ಲಿ ತಂಡದಲ್ಲಿದ್ದಿದ್ದರೆ ರಾಹುಲ್ ಗೆ ಬಹುಶಃ ತಂಡದಲ್ಲಿ ಸ್ಥಾನ ಸಿಗುವುದು ಕಷ್ಟವಿತ್ತೇನೋ. ಅಥವಾ ರಾಹುಲ್ ಬದಲು ಶ್ರೇಯಸ್ ಅಯ್ಯರ್ ಅಥವಾ ಗಿಲ್ ಸ್ಥಾನ ತ್ಯಾಗ ಮಾಡಬೇಕಾಗಿತ್ತು.

ಆದರೆ ಈಗ ವಿರಾಟ್ ಕೊಹ್ಲಿ ತಂಡದಿಂದ ಹೊರಗುಳಿದಿರುವುದು ರಾಹುಲ್, ಅಯ್ಯರ್, ಗಿಲ್ ಗೆ ಲಾಭಕರವಾಗಿದೆ. ಭಾರತದ ಪರ ಈಗಾಗಲೇ ಕೆಲವು ಟೆಸ್ಟ್ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದ ಯುವ ವಿಕೆಟ್ ಕೀಪರ್ ಬ್ಯಾಟಿಗ ಕೆ.ಎಸ್. ಭರತ್ ಗೂ ತಮ್ಮ ಸಾರ್ಮಥ್ಯ ಸಾಬೀತುಪಡಿಸಲು ಅವಕಾಶ ಸಿಕ್ಕಂತಾಗಿದೆ.

ಟೀಂ ಇಂಡಿಯಾ ಪರ ಆರಂಭಿಕರಾಗಿ ರೋಹಿತ್ ಶರ್ಮಾ ಜೊತೆ ಯಶಸ್ವಿ ಜೈಸ್ವಾಲ್ ಕಣಕ್ಕಿಳಿಯಬಹುದು. ಹಾಗೆ ನೋಡಿದರೆ ಜೈಸ್ವಾಲ್ ಆಫ್ರಿಕಾ ಸರಣಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹಾಗಿದ್ದರೂ ತವರಿನಲ್ಲಿ ಅವರು ಹುಲಿಯೇ. ರೋಹಿತ್ ಶರ್ಮಾಗೂ ಮತ್ತೆ ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮನ್ನು ಸಾಬೀತುಪಡಿಸುವ ಒತ್ತಡವಿದೆ. ಮೂರನೇ ಕ್ರಮಾಂಕದಲ್ಲಿ ಶುಬ್ಮನ್ ಗಿಲ್ ಗೆ ಅವಕಾಶ ಸಿಗುವುದು ಪಕ್ಕಾ ಆಗಿದೆ. ಹಾಗಾದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಐದನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಕಣಕ್ಕಿಳಿಯಲಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ ಕೊರತೆ ಎದ್ದು ಕಾಣುವ ಸಾಧ್ಯತೆ ಕಡಿಮೆ. ಯಾಕೆಂದರೆ ಭಾರತದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಸ್ಪಿನ್ ಗೆ ಸಹಕರಿಸುವ ಪಿಚ್ ಇರಲಿದೆ. ಹೀಗಾಗಿ ಅಶ್ವಿನ್-ಜಡೇಜಾ ಜೋಡಿಯಾಗಿ ಕಣಕ್ಕಿಳಿಯಲಿದ್ದಾರೆ. ವೇಗದ ಬೌಲಿಂಗ್ ನಲ್ಲಿ ಜಸ್ಪ್ರೀತ್ ಬುಮ್ರಾ ಜೊತೆಗೆ ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್ ಸಾಥ್ ನೀಡಬಹುದು.

ಸಂಭಾವ್ಯ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ (ಉಪನಾಯಕ), ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್.


Share this Story:

Follow Webdunia kannada

ಮುಂದಿನ ಸುದ್ದಿ

IND vs ENG: ಇಂಗ್ಲೆಂಡ್ ಕೆಡವಲು ಸ್ಪಿನ್ ಖೆಡ್ಡಾ ರೆಡಿ ಮಾಡಿರುವ ಟೀಂ ಇಂಡಿಯಾ