ರಾಜ್ ಕೋಟ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಸರ್ಫರಾಜ್ ಖಾನ್ ಗೆ ಚೊಚ್ಚಲ ಪಂದ್ಯವಾಡುತ್ತಿರುವ ಖುಷಿ.
ಬಹಳ ಸಮಯದಿಂದ ಸರ್ಫರಾಜ್ ದೇಶೀಯ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದೀಗ ಕಾಯುವಿಕೆಯ ನಂತರ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿದೆ. ಆದರೆ ಕಳೆದ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಈ ಪಂದ್ಯದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ಕ್ಯಾಪ್ ಪಡೆದಿದ್ದಾರೆ. ಹಿರಿಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕ್ಯಾಪ್ ನೀಡಿ ವಿಶ್ ಮಾಡಿದರು.
ಈ ವೇಳೆ ಸರ್ಫರಾಜ್ ಕುಟುಂಬಸ್ಥರೂ ಉಪಸ್ಥಿತರಿದ್ದರು. ಪುತ್ರ ಮೊದಲ ಬಾರಿಗೆ ಟೀಂ ಇಂಡಿಯಾ ಪರ ಆಡುವ ಗಳಿಗೆಯನ್ನು ಕಣ್ತುಂಬಿಕೊಂಡು ಸರ್ಫರಾಜ್ ತಂದೆ ಭಾವುಕರಾದರು. ತಂದೆಗೆ ಕ್ಯಾಪ್ ಹಸ್ತಾಂತರಿಸುತ್ತಿದ್ದಂತೇ ಅದಕ್ಕೆ ಮುತ್ತಿಕ್ಕಿ ಬಿಕ್ಕಿ ಬಿಕ್ಕಿ ಅತ್ತರು. ಈ ಭಾವುಕ ಗಳಿಗೆಯನ್ನು ನೋಡಿ ಅಲ್ಲಿ ನೆರೆದಿದ್ದವರೂ ಭಾವುಕರಾದರು.
ಇದೇ ಪಂದ್ಯದಲ್ಲಿ ಮತ್ತೊಬ್ಬ ಯುವ ವಿಕೆಟ್ ಕೀಪರ್ ಬ್ಯಾಟಿಗ ಧ್ರುವ ಜ್ಯುರೆಲ್ ಪದಾರ್ಪಣೆ ಮಾಡಿದ್ದಾರೆ. ಧ್ರುವಗೆ ಹಿರಿಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಕ್ಯಾಪ್ ನೀಡಿ ಗೌರವಿಸಿದರು.