ಕಾನ್ಪುರ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ 7 ವಿಕೆಟ್ ಗಳಿಂದ ಗೆದ್ದುಕೊಂಡ ಟೀಂ ಇಂಡಿಯಾ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ಇಂದು ದ್ವಿತೀಯ ಇನಿಂಗ್ಸ್ ನಲ್ಲಿ ಜಡೇಜಾ, ಆಕಾಶ್ ದೀಪ್ ದಾಳಿಗೆ ನಲುಗಿದ ಬಾಂಗ್ಲಾದೇಶ 146 ರನ ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ನಲ್ಲಿ 52 ರನ್ ಗಳ ಮುನ್ನಡೆ ಗಳಿಸಿದ್ದ ಭಾರತಕ್ಕೆ ದ್ವಿತೀಯ ಇನಿಂಗ್ಸ್ ನಲ್ಲಿ ಗೆಲುವಿಗೆ 95 ರನ್ ಗಳ ಗೆಲುವಿನ ಗುರಿ ಸಿಕ್ಕಿತ್ತು. ಇದನ್ನು ಬೆನ್ನತ್ತಿದ ಭಾರತ 3 ವಿಕೆಟ್ ಕಳೆದುಕೊಂಡು 98 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು.
ಮಳೆಯ ಅಡಚಣೆಯಿಂದಾಗಿ ಮೊದಲ ಮೂರು ದಿನ ಸರಿಯಾಗಿ ಪಂದ್ಯ ನಡೆದೇ ಇರಲಿಲ್ಲ. ಕೊನೆಯ ಎರಡು ದಿನದಲ್ಲಿ ಪಂದ್ಯ ನೀರಸ ಡ್ರಾನತ್ತ ಸಾಗಬಹುದು ಎಂದೇ ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಡಬ್ಲ್ಯುಟಿಸಿ ಶ್ರೇಯಾಂಕ ದೃಷ್ಟಿಯಿಂದ ಭಾರತಕ್ಕೆ ಗೆಲ್ಲಲೇಬೇಕಾಗಿತ್ತು.
ಹೀಗಾಗಿ ಭಾರತ ಮೊದಲ ಇನಿಂಗ್ಸ್ ನಲ್ಲೇ ಟಿ20 ಶೈಲಿಯಲ್ಲಿ ಬ್ಯಾಟ್ ಬೀಸಿ ಪಂದ್ಯದ ದಿಕ್ಕನ್ನೇ ಬದಲಿಸಿತು. ಜೊತೆಗೆ ಭಾರತೀಯ ಬೌಲರ್ ಗಳ ಸಂಘಟಿತ ಹೋರಾಟದಿಂದ ಬಾಂಗ್ಲಾ ಬ್ಯಾಟಿಗರು ಹೆಚ್ಚು ಹೊತ್ತು ಕ್ರೀಸ್ ನಲ್ಲಿರಲು ಸಾಧ್ಯವಾಗಲಿಲ್ಲ. ಸುಲಭ ಗುರಿ ಬೆನ್ನತ್ತಿದ ಭಾರತ ಪಂದ್ಯ ಗೆದ್ದುಕೊಂಡಿತು. ಇದರೊಂದಿಗೆ ಡಬ್ಲ್ಯುಟಿಸಿ ಶ್ರೇಯಾಂಕದಲ್ಲಿ ನಂ.1 ಪಟ್ಟ ಉಳಿಸಿಕೊಂಡಿತು.
ಭಾರತದ ಪರ ದ್ವಿತೀಯ ಇನಿಂಗ್ಸ್ ನಲ್ಲಿ ನಾಯಕ ರೋಹಿತ್ ಶರ್ಮಾ 8, ಯಶಸ್ವಿ ಜೈಸ್ವಾಲ್ 51, ಶುಬ್ಮನ್ ಗಿಲ್ 6 ರನ್ ಗಳಿಸಿ ಔಟಾದರೆ ವಿರಾಟ್ ಕೊಹ್ಲಿ ಅಜೇಯ 29, ರಿಷಭ್ ಪಂತ್ ಅಜೇಯ 4 ರನ್ ಗಳಿಸಿದರು.