ದುಬೈ: ಕೊರೋನಾ ಭೀತಿಯ ಹಿನ್ನಲೆಯಲ್ಲಿ ಇನ್ನು ಮುಂದಿನ ದಿನಗಳಲ್ಲಿ ಕ್ರಿಕೆಟ್ ನಲ್ಲಿ ಚೆಂಡು ಹೊಳಪು ಮೂಡಿಸಲು ಜೊಲ್ಲು ರಸ ಬಳಸುವುದನ್ನು ಐಸಿಸಿ ನಿಷೇಧಿಸಿದೆ. ಇದರ ಬಗ್ಗೆ ಬೌಲರ್ ಗಳ ಪ್ರತಿಕ್ರಿಯೆ ಏನು ಗೊತ್ತಾ?
ಚೆಂಡು ಹಳೆಯದಾದಂತೆ ಅದಕ್ಕೆ ಹೊಳಪು ಮೂಡಿಸಲು ಜೊಲ್ಲು ರಸ ಬಳಸುವುದು ಪರಿಣಾಮಕಾರಿ. ಬೌಲರ್ ಗಳಿಗೆ ಇದು ಅಭ್ಯಾಸವಾಗಿಬಿಟ್ಟಿದೆ. ಹೀಗಾಗಿ ಇದ್ದಕ್ಕಿದ್ದಂತೆ ನಿಷೇಧಿಸಿದರೆ ಈ ಅಭ್ಯಾಸವನ್ನು ರಾತ್ರಿ ಕಳೆದು ಹಗಲು ಬರುವುದರೊಳಗೆ ಬದಲಾಯಿಸಲು ಸಾಧ‍್ಯವಿಲ್ಲ ಎಂದು ಮಾಜಿ ವೇಗಿ ಬ್ರೆಟ್ ಲೀ ಹೇಳಿಕೊಂಡಿದ್ದಾರೆ. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡಾ ಹೆಚ್ಚು ಕಡಿಮೆ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು, ಭಾರತದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಬಾಲ್ ಹಳೆಯದಾದಂತೆ ಬೆವರಿನಿಂದ ಹೊಳಪು ಮೂಡಿಸಲು ಸಾಧ‍್ಯವಿಲ್ಲ. ಅದರಿಂದ ಬಾಲ್ ಮತ್ತಷ್ಟು ಗಡುಸಾಗಬಹುದಷ್ಟೇ. ಬೆವರಿನಿಂದ ಬಾಲ್ ಒದ್ದೆಯಾಗಬಹುದು ಆದರೆ ಹೊಳಪು ಬರಲ್ಲ ಎಂದಿದ್ದಾರೆ. ವೇಗಿ ಇಶಾಂತ್ ಶರ್ಮಾ ಕೂಡಾ ಹೀಗೇ ಹೇಳಿದ್ದಾರೆ. ಜೊಲ್ಲು ಇಲ್ಲದೇ ಬಾಲ್ ಶೈನ್ ಆಗಲ್ಲ ಎನ್ನುವುದು ಅವರ ಅಭಿಪ್ರಾಯ. ಒಟ್ಟಿನಲ್ಲಿ ಬೌಲರ್ ಗಳಿಗೆ ಈಗ ಹೊಸ ಪದ್ಧತಿಗೆ ಅಡ್ಜಸ್ಟ್ ಆಗುವುದು ಕಷ್ಟವಾಗಲಿದೆ.