ಮುಂಬೈ: ಭಾರತೀಯ ಕ್ರಿಕೆಟ್ ರಂಗದ ದಿಗ್ಗಜ, ಕ್ರಿಕೆಟ್ ದೇವರು ಎಂದೇ ಕರೆಯಿಸಿಕೊಳ್ಳುವ ಸಚಿನ್ ತೆಂಡುಲ್ಕರ್ ಇಂದು 51 ನೇ ಜನ್ಮದಿನ ಆಚರಿಸಿಕೊಳ‍್ಳುತ್ತಿದ್ದಾರೆ.
ಸಚಿನ್ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಅವರು ಆಡುತ್ತಿದ್ದ ಕಾಲದಲ್ಲಿ ಡಿಆರ್ ಎಸ್ ಜಾರಿಯಲ್ಲಿರಲಿಲ್ಲ. ಆದರೆ ಆಗಲೂ ಅನೇಕ ಬಾರಿ ಅಂಪಾಯರ್ ಗಳು ತಪ್ಪು ನಿರ್ಣಯ ಮಾಡುತ್ತಿದ್ದುದು ಸಹಜವಾಗಿತ್ತು. ಅಂಪಾಯರ್ ಗಳೂ ಮನುಷ್ಯರೇ ತಾನೇ?
ಆದರೆ ಈಗ ಅಂಪಾಯರ್ ಗಳು ತಪ್ಪು ನಿರ್ಣಯ ನೀಡಿದರೆ ಆಟಗಾರರಿಗೆ ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಡಿಆರ್ ಎಸ್ ನಿಯಮದ ಅನುಕೂಲವಿದೆ. ಆದರೆ ಸಚಿನ್ ಆಡುತ್ತಿದ್ದಾಗ ಡಿಆರ್ ಎಸ್ ಇರಲಿಲ್ಲ. ಫೀಲ್ಡ್ ಅಂಪಾಯರ್ ಗಳು ಮನಸ್ಸು ಮಾಡಿದರೆ ಥರ್ಡ್ ಅಂಪಾಯರ್ ಗೆ ಮನವಿ ಸಲ್ಲಿಸಬಹುದಿತ್ತು.
ಆದರೆ ಇದರಿಂದ ಕೆಲವೊಮ್ಮೆ ಆಟಗಾರರಿಗೆ ತೀರಾ ಅನ್ಯಾಯವಾಗುತ್ತಿತ್ತು. ಇದೇ ರೀತಿ ಸಚಿನ್ ತಮ್ಮ 20 ವರ್ಷಗಳ ವೃತ್ತಿ ಜೀವನದಲ್ಲಿ ಸುಮಾರು 39 ಬಾರಿ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದಾರೆ. ಆದರೆ ಆಗೆಲ್ಲಾ ಅವರು ಹೆಚ್ಚೆಂದರೆ ತಲೆ ತಮ್ಮಷ್ಟಕ್ಕೆ ತಾವೇ ಕೊಡವಿಕೊಂಡು ಮೌನವಾಗಿ ಪೆವಿಲಿಯನ್ ಗೆ ಹೆಜ್ಜೆಹಾಕುತ್ತಿದ್ದರು. ಅದರಲ್ಲೂ ವಿಶೇಷವಾಗಿ ವೆಸ್ಟ್ ಇಂಡೀಸ್ ಮೂಲದ ಅಂಪಾಯರ್ ಸ್ಟೀವ್ ಬಕ್ನರ್ ಅಂತೂ ಸಚಿನ್ ವಿರುದ್ಧ ವಿವಾದಾತ್ಮಕ ತೀರ್ಪು ನೀಡುವುದಕ್ಕೇ ಕುಖ್ಯಾತಿ ಪಡೆದಿದ್ದರು. ಅವರಷ್ಟು ಬಹುಶಃ ಸಚಿನ್ ರನ್ನು ಟಾರ್ಗೆಟ್ ಮಾಡಿದವರು ಇನ್ನೊಬ್ಬರಿರಲಿಲ್ಲ. ಹಾಗಿದ್ದರೂ ಒಮ್ಮೆಯೂ ಸಚಿನ್ ಅಂಪಾಯರ್ ಜೊತೆ ವಾಗ್ವಾದಕ್ಕಿಳಿದಿರಲಿಲ್ಲ. ಇದಕ್ಕೇ ಅವರು ಗ್ರೇಟ್ ಎನಿಸಿಕೊಂಡಿದ್ದು.