ಬೆಂಗಳೂರು: ಕೆಲವರಿಗೆ ಕೆಟ್ಟ ಮೇಲೂ ಬುದ್ಧಿ ಬರಲ್ಲ. ಅದಕ್ಕೆ ಈಗ ಹರ್ಷಿತ್ ರಾಣಾ ಉತ್ತಮ ಉದಾಹರಣೆ. ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಅವರ ವರ್ತನೆ ಈಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುವ ವೇಗಿ ಹರ್ಷಿತ್ ರಾಣಾ ಕಳೆದ ಸೀಸನ್ ಲ್ಲಿ ಎದುರಾಳಿ ಆಟಗಾರ ಮಯಾಂಕ್ ಅಗರ್ವಾಲ್ ರನ್ನು ಔಟ್ ಮಾಡಿದ ಬಳಿಕ ಫ್ಲೈಯಿಂಗ್ ಕಿಸ್ ಸೆಲೆಬ್ರೇಷನ್ ಮಾಡಿ ಒಂದು ಪಂದ್ಯಕ್ಕೆ ನಿಷೇಧದ ಶಿಕ್ಷೆಯನ್ನೂ ಅನುಭವಿಸಿದ್ದರು.
ಬಳಿಕ ಆ ಇಡೀ ಸೀಸನ್ ನಲ್ಲಿ ಅವರು ಕೊಂಚ ಸೈಲೆಂಟ್ ಆಗಿದ್ದರು. ಆದರೆ ಇಷ್ಟಾದರೂ ಅವರು ಬುದ್ಧಿ ಕಲಿತುಕೊಳ್ಳಲಿಲ್ಲ ಎನ್ನುವುದು ಈಗ ಸಾಬೀತಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಎ, ಬಿ ಮತ್ತು ಭಾರತ ಸಿ ನಡುವಿನ ಪಂದ್ಯದಲ್ಲಿ ಮತ್ತೆ ಅಂತಹದ್ದೇ ವರ್ತನೆ ತೋರಿದ್ದಾರೆ.
ಭಾರತ ಸಿ ತಂಡದ ನಾಯಕ ಋತುರಾಜ್ ಗಾಯಕ್ ವಾಡ್ ವಿಕೆಟ್ ಪಡೆದ ಹರ್ಷಿತ್ ರಾಣಾ ಮೈದಾನದಲ್ಲಿಯೇ ಫ್ಲೈಯಿಂಗ್ ಕಿಸ್ ಮಾಡಿ ಅವರನ್ನು ಬೀಳ್ಕೊಟ್ಟಿದ್ದಾರೆ. ಅವರ ಈ ವರ್ತನೆ ಈಗ ಮತ್ತೆ ಟೀಕೆಗೆ ಗುರಿಯಾಗಿದೆ. ಯುವ ಆಟಗಾರರು ಮೊದಲು ಶಿಸ್ತು ಕಲಿಯಬೇಕು. ಮೈದಾನದಲ್ಲಿ ಹೇಗೆ ವರ್ತಿಸಬೇಕು ಎಂಬ ಸಭ್ಯತೆಯೇ ಇಲ್ಲದೇ ಇದ್ದರೆ ಇಂತಹ ಆಟಗಾರರು ಯಾವುದೇ ಸಾಧನೆ ಮಾಡಿಯೂ ಪ್ರಯೋಜನವಿಲ್ಲ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.