ರಾಜ್ ಕೋಟ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ನಾಲ್ಕನೇ ಟಿ20 ಪಂದ್ಯದಲ್ಲಿ ಮತ್ತೆ ಟಾಸ್ ಸೋತ ಟೀಂ ಇಂಡಿಯಾ ಮತ್ತೊಮ್ಮೆ ಮೊದಲು ಬ್ಯಾಟಿಂಗ್ ನಡೆಸಿದೆ.
ಆರಂಭಿಕ ಋತುರಾಜ್ ಗಾಯಕ್ ವಾಡ್ ಕೇವಲ 5 ರನ್, ಶ್ರೇಯಸ್ ಅಯ್ಯರ್ 4, ರಿಷಬ್ ಪಂತ್ 17 ರನ್ ಗಳಿಸಿ ಔಟಾದರು. ಇಶಾನ್ ಕಿಶನ್ 27 ರನ್ ಗಳ ಕೊಡುಗೆ ನೀಡಿದರು.
ಟೀಂ ಇಂಡಿಯಾ ಸಂಕಷ್ಟದಲ್ಲಿದ್ದಾಗ ಮತ್ತೆ ಆಪತ್ ಬಾಂಧವರಾದ ಹಾರ್ದಿಕ್ ಪಾಂಡ್ಯ-ದಿನೇಶ್ ಕಾರ್ತಿಕ್ ಜೋಡಿ ಸ್ಪೋಟಕ ಬ್ಯಾಟಿಂಗ್ ನಿಂದ ಭಾರತಕ್ಕೆ ಗೌರವಯುತ ಮೊತ್ತ ನೀಡಲು ಸಫಲರಾದರು. ಪಾಂಡ್ಯ 31 ಎಸೆತಗಳಲ್ಲಿ 46 ರನ್ ಸಿಡಿಸಿ ಔಟಾದರು. ದಿನೇಶ್ ಕಾರ್ತಿಕ್ ಕೇವಲ 27 ಎಸೆತಗಳಲ್ಲಿ 55 ರನ್ ಗಳಿಸಿದರು. ಇದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರ ಮೊದಲ ಅರ್ಧಶತಕವಾಗಿತ್ತು. ಇದರೊಂದಿಗೆ ಟೀಂ ಇಂಡಿಯಾ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಲು ಸಫಲವಾಯಿತು.