ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವೆ ಎಲ್ಲಿಯೇ ಪಂದ್ಯ ನಡೆಯಲಿ. ಅಭಿಮಾನಿಗಳು ಅದೇನೋ ಆಗಿ ಹೋಗುತ್ತದೆಂಬ ಆತಂಕದಿಂದ ಪೂಜೆ ಸಲ್ಲಿಸುತ್ತಾರೆ. ಅಭಿಮಾನಿಗಳ ಈ ಅತಿರೇಕದ ವರ್ತನೆಯಿಂದಲೇ ಈ ಪಂದ್ಯಕ್ಕೆ ಇಷ್ಟೊಂದು ಕಳೆ ಬರುತ್ತದೆ.
ನಿನ್ನೆಯಿಂದಲೇ ರಾಜ್ಯದ ವಿವಿದೆಡೆ ಅಭಿಮಾನಿಗಳು ದೇವಾಲಯಗಳಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಧಾರವಾಡ, ಮೈಸೂರಿನಲ್ಲಿ ವಿವಿಧ ಸಂಘಟನೆಯ ಕಾರ್ಯಕರ್ತರು ಬ್ಯಾಟ್, ಬಾಲ್, ಭಾರತದ ರಾಷ್ಟ್ರ ಧ್ವಜವನ್ನು ದೇವರ ಮುಂದಿಟ್ಟು ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಟೀಂ ಇಂಡಿಯಾ ಗೆದ್ದು ಬಾ. ಪಾಕಿಸ್ತಾನವನ್ನು ಪುಡಿಗಟ್ಟು ಎಂಬ ಘೋಷಣೆ ಕೂಗುತ್ತಿದ್ದಾರೆ. ಉಭಯ ದೇಶಗಳ ನಡುವೆ ಯುದ್ಧವೇ ನಡೆಯುತ್ತಿದೆಯೋನೋ ಎಂಬ ವಾತಾವರಣ ನಿರ್ಮಾಣವಾಗುತ್ತಿದೆ. ಸೋತ ದೇಶದಲ್ಲಿ ಅಭಿಮಾನಿಗಳು ರೊಚ್ಚಿಗೇಳುವುದು, ಗೆದ್ದ ದೇಶದಲ್ಲಿ ಅಭಿಮಾನಿಗಳ ಮಿತಿ ಮೀರಿದ ಸಂಭ್ರಮವೇ ಈ ಪಂದ್ಯಕ್ಕೆ ಮತ್ತಷ್ಟು ಕಳೆ ನೀಡುತ್ತದೆ.
ಗಡಿಯಲ್ಲಿ ಭಾರತೀಯ ಸೈನಿಕರೂ ಒಟ್ಟು ಸೇರಿ ವಿಶೇಷವಾಗಿ ಭಾರತ ತಂಡಕ್ಕೆ ಶುಭಕೋರಿದ್ದಾರೆ. ಅಲ್ಲದೆ, ಬಾಲಿವುಡ್, ಇತರ ಕ್ರೀಡಾ ಕ್ಷೇತ್ರದ ಗಣ್ಯರು ಸೇರಿದಂತೆ ದೇಶದೆಲ್ಲೆಡೆ ಒಂದೇ ಮಾತು ಕೇಳಿ ಬರುತ್ತಿದೆ. ಅದುವೇ ಗೆದ್ದು ಬಾ ಭಾರತ!
2007 ರಲ್ಲಿ ಇದಕ್ಕಿಂತ ಮೊದಲು ಭಾರತ-ಪಾಕಿಸ್ತಾನ ಫೈನಲ್ ಪಂದ್ಯವೊಂದು ನಡೆದಾಗ ಬೆಂಗಳೂರು ಸೇರಿದಂತೆ ದೇಶದ ಹೆಚ್ಚಿನ ಪ್ರಮುಖ ನಗರಗಳಲ್ಲಿ ಸ್ವಯಂ ಘೋಷಿತ ಬಂದ್ ವಾತಾವರಣ ಸೃಷ್ಟಿಯಾಗಿತ್ತು. ಇಂದೂ ಅದೇ ರೀತಿ ಮತ್ತೊಮ್ಮೆ ಇತಿಹಾಸ ಪುನರಾವರ್ತನೆಯಾಗುವುದು ನಿಶ್ಚಿತ.