ಲಂಡನ್: ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಅದ್ಯಾವುದೇ ವೇದಿಕೆಯಲ್ಲಿ ಎದುರಾಗಲಿ. ಕುತೂಹಲದ ಕಣ್ಣುಗಳು ಅವರನ್ನೇ ಹಿಂಬಾಲಿಸುತ್ತಿರುತ್ತವೆ. ಹಾಗೆಯೇ ಇಂದು ನಡೆಯಲಿರುವ ಭಾರತ-ಪಾಕ್ ಕ್ರಿಕೆಟ್ ಪಂದ್ಯವನ್ನು ಐಸಿಸಿಯ ಪ್ರತಿಷ್ಠಿತ ಟೂರ್ನಿ ಎನ್ನುವುದಕ್ಕಿಂತ ಅಭಿಮಾನಿಗಳು ಇನ್ನೇನೋ ಹುಡುಕುತ್ತಿರುತ್ತಾರೆ.
ಈ ಪಂದ್ಯಕ್ಕೆ ಆಟಗಾರರಿಗಿಂತ ಅಭಿಮಾನಿಗಳಿಗೇ ಹೆಚ್ಚು ಸಂಭ್ರಮ, ಆತಂಕ. ನಮಗೆ ಇದು ಒಂದು ಸಾಮಾನ್ಯ ಪಂದ್ಯವಷ್ಟೇ ಎಂದು ಭಾರತೀಯ ಕ್ರಿಕೆಟಿಗರು ಯಾವತ್ತೂ ಹೇಳುತ್ತಿರುತ್ತಾರೆ. ಮೊನ್ನೆಯಷ್ಟೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡಾ ಅದನ್ನೇ ಹೇಳಿದ್ದರು.
ಆದರೂ ಇದು ಉಭಯ ತಂಡಗಳಿಗೂ ಪ್ರತಿಷ್ಠೆಯ ಕಣ. ಗೆಲ್ಲದಿದ್ದರೆ ಹೊರಗಡೆ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಬೇಕಾದೀತು ಎಂಬ ಭಯ ಆಟಗಾರರಲ್ಲಿ ಇದ್ದೇ ಇರುತ್ತದೆ. ಆದರೆ ಭಾರತದ ಅದೃಷ್ಟ ಇದುವರೆಗೆ ಒಂದು ಬಾರಿ ಮಾತ್ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಕ್ ವಿರುದ್ಧ ಸೋತಿದೆ. ಅದು ಬಿಟ್ಟರೆ ಪ್ರತೀ ಬಾರಿಯೂ ಗೆಲುವು ದಾಖಲಿಸಿದೆ.
ಅದೆಲ್ಲಕ್ಕೂ ಅದೃಷ್ಟವೇ ಕಾರಣವಲ್ಲ. ಕಳೆದೊಂದು ದಶಕದಿಂದ ಭಾರತ ಬಲಿಷ್ಠವಾಗಿದೆ. ಪಾಕ್ ತಂಡ ಕಳೆಗುಂದಿದೆ. ಅವರ ಬೌಲರ್ ಗಳಲ್ಲಿ ಈಗ ಮೊದಲಿನ ಮೊನಚಿಲ್ಲ. ಸ್ಟಾರ್ ಬ್ಯಾಟ್ಸ್ ಮನ್ ಗಳಿಲ್ಲ. ಹೀಗಾಗಿ ಅದು ಮೇಲ್ನೋಟಕ್ಕೆ ದುರ್ಬಲವಾಗಿದೆ.
ಆದರೆ ಮೊದಲೇ ಹೇಳಿದಂತೆ ಪಾಕ್ ಆಟಗಾರರೂ, ಭಾರತದ ವಿರುದ್ಧ ಆಡುವಾಗ ತಮ್ಮೆಲ್ಲಾ ಶಕ್ತಿ ಮೀರಿ ಗೆಲುವಿಗೆ ಪ್ರಯತ್ನಿಸುತ್ತಾರೆ. ಹಾಗಾಗಿ ಅವರನ್ನು ಸೋಲಿಸುವುದು ಸುಲಭವಾಗದು. ಅದರಲ್ಲೂ ಜುನೈದ್ ಖಾನ್ ಮತ್ತು ಮೊಹಮ್ಮದ್ ಅಮೀರ್ ಪಾಕ್ ನ ಪ್ರಮುಖ ಬೌಲಿಂಗ್ ಅಸ್ತ್ರಗಳು.
ಬ್ಯಾಟಿಂಗ್ ವಿಭಾಗದಲ್ಲಿ ಬಾಬರ್ ಅಝಮ್ ಇತ್ತೀಚೆಗೆ ಸದ್ದು ಮಾಡುತ್ತಿರುವ ಯುವ ಕ್ರಿಕೆಟಿಗ. ಉತ್ತಮ ಸರಾಸರಿ ಹೊಂದಿರುವ ಬ್ಯಾಟ್ಸ್ ಮನ್. ಅದೇನೇ ಇದ್ದರೂ ಅವರಿಗೆ ಅಂತಾರಾಷ್ಟ್ರೀಯ ಪಂದ್ಯದ ಒತ್ತಡ, ಭಾರತೀಯ ಬೌಲರ್ ಗಳ ನಿಖರ ಬೌಲಿಂಗ್ ಎದುರಿಸುವ ಛಾತಿ ಬೇಕು. ಹಳೆಯ ಹುಲಿ ಉಮರ್ ಅಕ್ಮಲ್ ಫಾರ್ಮ್ ಕಂಡುಕೊಳ್ಳಬೇಕಿದೆ.
ಅತ್ತ ಪಾಕ್ ತಂಡಕ್ಕೆ ಹೋಲಿಸಿದರೆ ಭಾರತ ಎಲ್ಲಾ ರೀತಿಯಿಂದಲೂ ಮೇಲುಗೈ ಸಾಧಿಸಿದೆ. ಬೌಲರ್ ಗಳೆಲ್ಲರೂ ಫಾರ್ಮ್ ನಲ್ಲಿದ್ದು, ಫಿಟ್ ಆಗಿರುವುದರಿಂದ ಯಾರನ್ನು ಆಡಿಸಬೇಕು ಎನ್ನುವ ತಲೆನೋವು ನಾಯಕನಿಗೆ ಎದುರಾಗಲಿದೆ. ಬ್ಯಾಟಿಂಗ್ ವಿಭಾಗದಲ್ಲಿ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಸಿಡಿಯಬೇಕಿದೆ. ಮಧ್ಯಮ ಕ್ರಮಾಂಕಕ್ಕೆ ಕೊಹ್ಲಿ, ಧೋನಿಯೇ ಆಧಾರ. ಯುವರಾಜ್ ನಂಬಿಕೊಂಡು ಕೂರುವಂತಿಲ್ಲ.
ಹಾಗಿದ್ದರೂ ಫಾರ್ಮ್, ಕ್ಲಾಸ್ ಏನೇ ಇರಲಿ. ಈ ಪಂದ್ಯದಲ್ಲಿ ಪ್ರೇಕ್ಷಕರ ಹುಯಿಲು ಮುಗಿಲು ಮುಟ್ಟಲಿದೆ. ಒಂದು ಕ್ರಿಕೆಟ್ ಪಂದ್ಯಕ್ಕಿರಬೇಕಾದ ಎಲ್ಲಾ ಗಮ್ಮತ್ತುಗಳು ಇಲ್ಲಿ ಕಂಡುಬರಲಿವೆ. ಪ್ರೇಕ್ಷಕರು ಹುಚ್ಚೆದ್ದು ಕುಣಿದಷ್ಟು ಆಟಗಾರರಿಗೂ ಉತ್ಸಾಹ ಬರುತ್ತದೆ. ಆಲ್ ದಿ ಬೆಸ್ಟ್ ಇಂಡಿಯಾ!
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಸಮಯ: ಭಾರತೀಯ ಕಾಲಮಾನ ಮಧ್ಯಾಹ್ನ 3.00 ಗಂಟೆಗೆ
ಸ್ಥಳ: ಎಡ್ಜ್ ಬಾಸ್ಟನ್