ಲಕ್ನೋ: ಆರ್ ಸಿಬಿ-ಲಕ್ನೋ ನಡುವಿನ ಪಂದ್ಯದ ಬಳಿಕ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ನಡುವೆ ನಡೆದ ಮಾತಿನ ಚಕಮಕಿ ವೈರಲ್ ಆಗಿತ್ತು.
ಈ ವೇಳೆ ಇಬ್ಬರ ನಡುವೆ ನಡೆದಿದ್ದ ಜಗಳವೇನು ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದ್ದಾರೆ. ಪಂದ್ಯದ ಬಳಿಕ ಲಕ್ನೋ ಆಟಗಾರ ಕೈಲ್ ಮೇಯರ್ಸ್ ಆರ್ ಸಿಬಿ ಆಟಗಾರ ಕೊಹ್ಲಿ ಬಳಿ ಬಂದು ಪಂದ್ಯದುದ್ದಕ್ಕೂ ನೀವ್ಯಾಕೆ ನನ್ನ ಮತ್ತು ನನ್ನ ತಂಡವನ್ನು ಬೈಯುತ್ತಲೇ ಇದ್ದಿರಿ ಎಂದು ಕೇಳಿದ್ದಾರೆ. ಇದಕ್ಕೆ ಕೊಹ್ಲಿ ನೀವ್ಯಾಕೆ ನನ್ನನ್ನು ದಿಟ್ಟಿಸುತ್ತಿದ್ದರಿ? ಎಂದು ಪ್ರಶ್ನಿಸಿದ್ದಾರೆ. ಆ ವೇಳೆ ಗಂಭೀರ್ ಹೆಚ್ಚು ಮಾತಕತೆ ಬೇಡವೆಂದು ಮೇಯರ್ಸ್ ರನ್ನು ಪಕ್ಕಕ್ಕೆ ಎಳೆದೊಯ್ದಿದ್ದಾರೆ.
ಈ ವೇಳೆ ಕೊಹ್ಲಿ ಕಾಮೆಂಟ್ ಮಾಡಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ಜೋರಾಯಿತು. ಆಗ ಗಂಭೀರ್ ಏನು ಹೇಳಬೇಕೋ ಹೇಳು ಎಂದಿದ್ದಾರೆ. ಆಗ ಕೊಹ್ಲಿ ನಾನು ನಿಮ್ಮ ಜೊತೆ ಮಾತನಾಡಿಯೇ ಇಲ್ಲ, ನೀವ್ಯಾಕೆ ಮಧ್ಯೆ ಮಾತನಾಡುತ್ತೀರಿ? ಎಂದು ಪ್ರಶ್ನಿಸಿದ್ದಾರೆ.
ಆಗ ಗಂಭೀರ್ ನೀನು ನನ್ನ ಆಟಗಾರರಿಗೆ ಹೇಳಿದರೆ ನನ್ನ ಕುಟುಂಬಕ್ಕೆ ಹೇಳಿದಂತೆ ಎಂದಿದ್ದಾರೆ. ಇದಕ್ಕೆ ಕೊಹ್ಲಿ ಹಾಗಿದ್ದರೆ ನಿಮ್ಮ ಕುಟುಂಬವನ್ನು ಸರಿಯಾಗಿ ನೋಡಿಕೊಳ್ಳಿ ಎಂದು ಪ್ರತ್ಯುತ್ತರ ನೀಡಿದ್ದಾರೆ. ಕೊನೆಯಲ್ಲಿ ಗಂಭೀರ್ ಇನ್ಮುಂದೆ ನಾನು ನಿನ್ನಿಂದ ಕಲಿಯಬೇಕು ಎಂದು ಕೋಪದಿಂದ ಹೇಳಿದ್ದಾರೆ. ಈ ಮಾತಿನ ಚಕಮಕಿಯ ತಪ್ಪಿಗೆ ಈಗ ಇಬ್ಬರಿಗೂ ದಂಡ ವಿಧಿಸಲಾಗಿದೆ.