ನ್ಯಾಟಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಬೌಲಿಂಗ್ ವಿಭಾಗದಲ್ಲಿ ಭಾರೀ ಬದಲಾವಣೆ ಮಾಡಿದ ಟೀಂ ಇಂಡಿಯಾ ಅದಕ್ಕೆ ತಕ್ಕ ಬೆಲೆ ತೆತ್ತಿತ್ತು.
ಕಳೆದ ಪಂದ್ಯದಲ್ಲಿ ಪಂದ್ಯ ಶ್ರೇಷ್ಠರಾಗಿದ್ದ ಭುವನೇಶ್ವರ್ ಕುಮಾರ್ ಮತ್ತು ಇನ್ನೊಬ್ಬ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾರನ್ನು ಏಕಕಾಲಕ್ಕೆ ಹೊರಗಿಟ್ಟ ಟೀಂ ಇಂಡಿಯಾಕ್ಕೆ ಇಂಗ್ಲೆಂಡ್ ಬ್ಯಾಟಿಗರು ತಕ್ಕ ರೀತಿಯಲ್ಲಿ ತಿರುಗೇಟು ನೀಡಿದರು. ಅತೀ ದುಬಾರಿಯಾಗಿದ್ದು ಉಮ್ರಾನ್ ಮಲಿಕ್. ಅವರು ನಾಲ್ಕು ಓವರ್ ಗಳ ಕೋಟಾದಲ್ಲಿ ಭರ್ತಿ 56 ರನ್ ನೀಡಿದರು! ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತು.
ಅದರಲ್ಲೂ ಡೇವಿಡ್ ಮಲನ್ ಕೇವಲ 39 ಎಸೆತಗಳಲ್ಲಿ 77 ರನ್ ಚಚ್ಚಿದರು. 17 ನೆಯ ಓವರ್ ವರೆಗೂ ಅವರ ಅಬ್ಬರ ಮುಂದುವರಿದಿತ್ತು. ಕೊನೆಗೂ ರವಿ ಬಿಷ್ಣೋಯ್ ಎಸೆತದಲ್ಲಿ ಮಲನ್ ಔಟಾದಾಗ ಟೀಂ ಇಂಡಿಯಾ ನಿಟ್ಟುಸಿರಿಟ್ಟಿತು. ಆದರೆ ಬಳಿಕ ಜೊತೆಯಾದ ಲಿವಿಂಗ್ ಸ್ಟೋನ್ (ಅಜೇಯ 42), ಹ್ಯಾರೀ ಬ್ರೂಕ್ (19) ತಂಡದ ಮೊತ್ತವನ್ನು 200 ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ರವಿ ಬಿಷ್ಣೋಯ್, ಹರ್ಷಲ್ ಪಟೇಲ್ ತಲಾ 2, ಉಮ್ರಾನ್ ಮಲಿಕ್, ಆವೇಶ್ ಖಾನ್ ತಲಾ 1 ವಿಕೆಟ್ ಕಬಳಿಸಿದರು.