ಮುಂಬೈ: ಟೀಂ ಇಂಡಿಯಾ ಕೋಚ್ ಆಗಿದ್ದ ಅನಿಲ್ ಕುಂಬ್ಳೆಯನ್ನು ಆ ಸ್ಥಾನದಿಂದ ಕಿತ್ತೊಗೆಯಲು ನಾಯಕ ವಿರಾಟ್ ಕೊಹ್ಲಿ ವ್ಯವಸ್ಥಿತವಾಗಿ ತಂತ್ರ ಹೆಣೆದಿದ್ದರಂತೆ! ಹಾಗಂತ ಬಿಸಿಸಿಐ ಆಡಳಿತ ಮಂಡಳಿ ಸದಸ್ಯೆಯಾಗಿರುವ ಡಿಯನಾ ಎಡುಲ್ಜಿ ಬಿಸಿಸಿಐ ಅಧಿಕಾರಿಗಳಿಗೆ ಮಾಡಿರುವ ಈಮೇಲ್ ನಲ್ಲಿ ಬಹಿರಂಗವಾಗಿದೆ.
ಭಾರತ ಮಹಿಳಾ ತಂಡಕ್ಕೆ ಕೋಚ್ ಆಯ್ಕೆ ವಿಚಾರದಲ್ಲಿ ಎಡುಲ್ಜಿ ಮಾಡಿದ್ದ ಈ ಮೇಲ್ ಸೋರಿಕೆಯಾಗಿದ್ದು, ಅದರಲ್ಲಿ ಕೊಹ್ಲಿ ಮತ್ತು ಕುಂಬ್ಳೆ ನಡುವಿನ ವೈಮನಸ್ಯದ ಉಲ್ಲೇಖವಿದೆ. ಮಹಿಳಾ ತಂಡದ ಕೋಚ್ ರಮೇಶ್ ಪೊವಾರ್ ರನ್ನು ಮಿಥಾಲಿ ರಾಜ್ ಜತೆಗಿನ ವೈಮನಸ್ಯದ ನಂತರ ಕಿತ್ತು ಹಾಕಲಾಗುತ್ತಿದೆ. ಪೊವಾರ್ ರನ್ನೇ ಮುಂದುವರಿಸಲು ನಾಯಕಿ ಹರ್ಮನ್ ಪ್ರೀತ್ ಕೌರ್ ಆಗ್ರಹಿಸುವುದಕ್ಕೆ ಬಿಸಿಸಿಐ ಬೆಲೆ ಕೊಡದೇ ಇರುವುದನ್ನು ಪ್ರಶ್ನಿಸಿ ಎಡುಲ್ಜಿ ಈಮೇಲ್ ಮಾಡಿದ್ದು, ಈ ಈ ಮೇಲ್ ನಲ್ಲಿ ಅಂದು ಕೊಹ್ಲಿ ಮಾತು ಕೇಳಿ ಕುಂಬ್ಳೆಯಂತಹ ದಿಗ್ಗಜನನ್ನು ಕೋಚ್ ಸ್ಥಾನದಿಂದ ಕಿತ್ತು ಹಾಕಲಾಯಿತು. ಅದೇ ನಿಯಮ ಮಹಿಳಾ ಕ್ರಿಕೆಟ್ ನಾಯಕಿ ಮತ್ತು ಕೋಚ್ ಗೂ ಯಾಕೆ ಅನ್ವಯವಾಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
2017 ರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ವೇಳೆ ಕುಂಬ್ಳೆ-ಕೊಹ್ಲಿ ವೈಮನಸ್ಯ ತಾರಕಕ್ಕೇರಿತ್ತು. ಅದದರ ಬಳಿಕ ಕುಂಬ್ಳೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕುಂಬ್ಳೆ ವಿರುದ್ಧ ಆಗಾಗ ಕೊಹ್ಲಿ ಬಿಸಿಸಿಐ ಸಿಇಒಗೆ ಮೆಸೇಜ್ ಮಾಡಿ ದೂರುತ್ತಿದ್ದರು. ಈ ಮೂಲಕ ಅವರನ್ನು ಕೋಚ್ ಸ್ಥಾನದಿಂದ ಕಿತ್ತು ಹಾಕಲು ಕಾರಣರಾದರು ಎಂದು ಎಡುಲ್ಜಿ ಮಾಡಿರುವ ಈ ಮೇಲ್ ನಲ್ಲಿ ಉಲ್ಲೇಖಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ