ಶ್ರೀಲಂಕಾ ಏಕದಿನ ಸರಣಿಯಿಂದ ಸುರೇಶ್ ರೈನಾ ಮತ್ತು ಯುವರಾಜ್ ಸಿಂಗ್ ಅವರನ್ನ ಹೊರಗಿಡಲಾಗಿದ್ದು, ಆಡದಿದ್ದರೆ ಧೋನಿಗೂ ಬದಲಿ ಆಟಗಾರರನ್ನ ನೊಡುತ್ತೇವೆ. ಧೋನಿ ಆಟೋಮೇಟಿಕ್ ಆಯ್ಕೆಯಲ್ಲ ಎಂದಿದ್ದ ಆಯ್ಕೆ ಸಮಿತಿ ಮುಖ್ಯಸ್ಥ ಎಂಸ್`ಕೆ ಪ್ರಸಾದ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕಿಡಿ ಕಾರಿದ್ದಾರೆ.
ಧೋನಿ ಮತ್ತು ಎಂಎಸ್`ಕೆ ಪ್ರಸಾದ್ ಕ್ರಿಕೆಟ್ ದಾಖಲೆಗಳನ್ನ ಮುಂದಿಟ್ಟಿರುವ ಅಭಿಮಾನಿಗಳು. ಧೋನಿ ಆಯ್ಕೆ ಬಗ್ಗೆ ಮಾತನಾಡಲು ನಿನಗೇನಿದೆ ಅರ್ಹತೆ ಎಂಬಂತೆ ಉತ್ತರ ಕೊಟ್ಟಿದ್ಧಾರೆ. ಧೋನಿ ಆಟೋಮೇಟಿಕ್ ಆಯ್ಕೆಯಲ್ಲ ಎನ್ನುವ ಎಂಎಸ್`ಕೆ ಪ್ರಸಾದ್ ಕ್ರಿಕೆಟ್ ದಾಖಲೆ ನೊಡಿದರೆ ಹೆಜ್ಜೆ ಇಡಲೂ ಯೋಗ್ಯತೆ ಇಲ್ಲ ಎಂದು ಒಬ್ಬ ಅಭಿಮಾನಿ ಟೀಕಿಸಿದ್ದಾರೆ.
ಕೇವಲ 6 ಟೆಸ್ಟ್ ಮತ್ತು 17 ಏಕದಿನ ಪಂದ್ಯಗಳನ್ನಾಡಿರುವ ಇವನು ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾರಂತಹ ಆಟಗಾರರ ಭವಿಷ್ಯ ನಿರ್ಧರಿಸುತ್ತಾನೆ. ಸಾಲದೆಂಬಂತೆ ಧೋನಿ ಬಗ್ಗೆ ಕಾಮೆಂಟ್ ಮಾಡುತ್ತಾನೆಂದು ಅಭಿಮಾನಿಯೊಬ್ಬ ಕುಟುಕಿದ್ಧಾನೆ.
ಧೋನಿ ಮೇಲೆ ಒತ್ತಡ ಹೇರಿ ನಾಯಕತ್ವ ತ್ಯಜಿಸುವಂತೆ ಮಾಡಿದ ಪ್ರಸಾದ್ ಈಗ ಅಂತಾರಾಷ್ಟ್ರೀಯ ಕ್ರಿಕೆಟ್`ನಿಂದಲೇ ನಿವೃತ್ತಿ ಕೊಡಿಸಲು ಒತ್ತಡ ಹಾಕುತ್ತಿದ್ದಾನೆ. ಭಾರತದ ಪರ ಪ್ರಸಾದ್ ಎಷ್ಟು ಪಂದ್ಯಗಳನ್ನಾಡಿದ್ದಾನೆ..? ಕೆಲವೇ ಕೆಲವು ಪಂದ್ಯ ಆಡಿರುವ ಅವನ್ಯಾಕೆ ಆಯ್ಕೆ ಸಮಿತಿ ಮುಖ್ಯಸ್ಥನಾಗಿದ್ದಾನೆ ಎಂದು ಮತ್ತೊಬ್ಬ ಅಭಿಮಾನಿ ಪ್ರಶ್ನಿಸಿದ್ದಾರೆ.