ಪುಣೆ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಇಂಗ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ನಡುವೆ ಔಪಚಾರಿಕ ಪಂದ್ಯ ನಡೆಯಲಿದೆ.
ಎರಡೂ ತಂಡಗಳೂ ಈಗಾಗಲೇ ಕೂಟದಿಂದ ಹೊರಬಿದ್ದಂತಾಗಿದೆ. ಹೀಗಾಗಿ ಪ್ರತಿಷ್ಠೆ ಉಳಿಸಿಕೊಳ್ಳುವ ನಿಟ್ಟಿನಿಂದ ಹಾಲಿ ಚಾಂಪಿಯನ್ ಇಂಗ್ಲೆಂಡ್ ಇದು ಕೊನೆಯ ಅವಕಾಶವಾಗಲಿದೆ. ಇಂಗ್ಲೆಂಡ್ ಈ ಬಾರಿ ಆರಂಭದಿಂದಲೂ ಬ್ಯಾಟಿಂಗ್ ನಲ್ಲಿ ದಯನೀಯ ವೈಫಲ್ಯ ಅನುಭವಿಸಿದೆ. ನಾಯಕ ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್ ಮುಂತಾದ ಘಟಾನುಘಟಿಗಳ ಫಾರ್ಮ್ ಪ್ರಶ್ನಾರ್ಥಕವಾಗಿದೆ. ಇದುವರೆಗೆ ಆಡಿದ 7 ಪಂದ್ಯಗಳಲ್ಲಿ ಇಂಗ್ಲೆಂಡ್ ಗೆ ಕೇವಲ 1 ಗೆಲುವು ಮಾತ್ರ ದಕ್ಕಿದೆ. ಹೀಗಾಗಿ ಇಂದು ಗೆಲುವು ಕಾಣುವ ವಿಶ್ವಾಸದಲ್ಲಿದೆ.
ಇತ್ತ ನೆದರ್ಲ್ಯಾಂಡ್ಸ್ ದುರ್ಬಲ ತಂಡವಾಗಿಯೇ ಕೂಟ ಪ್ರವೇಶ ಮಾಡಿತ್ತು. ಆದರೆ ಇದುವರೆಗೆ ಆಡಿದ 7 ಪಂದ್ಯಗಳಿಂದ 2 ಗೆಲುವು ಕಂಡಿದೆ. ಅದರಲ್ಲೂ ಕೂಟದ ಪ್ರಬಲ ತಂಡಗಳಲ್ಲೊಂದಾದ ದ.ಆಫ್ರಿಕಾ ವಿರುದ್ಧ ಅಚ್ಚರಿಯ ಗೆಲುವು ಕಂಡಿದ್ದು ವಿಶೇಷ. ಈ ಪಂದ್ಯ ಅಪರಾಹ್ನ 2 ಗಂಟೆಗೆ ಪುಣೆ ಮೈದಾನದಲ್ಲಿ ನಡೆಯಲಿದೆ.