ಅಹಮ್ಮದಾಬಾದ್: ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ನಾಳೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಸಾಂಪ್ರದಾಯಿಕ ಎದುರಾಳಿಗಳ ಪಂದ್ಯಕ್ಕೆ ಮುನ್ನ ಎಕ್ಸ್ (ಟ್ವಿಟರ್) ನಲ್ಲಿ ಬಾಯ್ಕಾಟ್ ಬಿಸಿ ಟ್ರೆಂಡ್ ಶುರುವಾಗಿದೆ.
ಸದಾ ಭಾರತಕ್ಕೆ ಉಗ್ರರನ್ನು ಛೂ ಬಿಟ್ಟು ಕಾಟ ಕೊಡುವ ಪಾಕಿಸ್ತಾನದ ಜೊತೆಗೆ ಉಭಯ ದೇಶಗಳ ಸರಣಿ ಆಡುವುದನ್ನು ಬಿಟ್ಟು ಎಷ್ಟೋ ಸಮಯವೇ ಆಗಿದೆ. ಆದರೆ ಐಸಿಸಿ ಕೂಟಗಳಲ್ಲಿ ಎರಡೂ ತಂಡಗಳು ಎದುರಾಗುತ್ತವೆ.
ಇದೀಗ ಭಾರತದಲ್ಲೇ ನಡೆಯುತ್ತಿರುವ ಏಕದಿನ ವಿಶ್ವಕಪ್ ನಲ್ಲಿ ಉಭಯ ತಂಡಗಳು ಸೆಣಸಾಡುತ್ತಿವೆ. ಆದರೆ ಈ ಪಂದ್ಯಕ್ಕೆ ಸ್ವತಃ ಬಿಸಿಸಿಐ ವಿಶೇಷ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿ ಭರ್ಜರಿ ಪ್ರಚಾರ ನೀಡುತ್ತಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗ ಎಕ್ಸ್ ನಲ್ಲಿ ಬಾಯ್ಕಾಟ್ ಇಂಡೋ ಪಾಕ್ ಮ್ಯಾಚ್ ಎಂಬ ಹ್ಯಾಶ್ ಟ್ಯಾಗ್ ನಡಿ ಅಭಿಯಾನ ಆರಂಭವಾಗಿದೆ. ಭಾರತದ ವೀರ ಯೋಧರ ಪ್ರಾಣತ್ಯಾಗದ ಫೋಟೋಗಳನ್ನು ಪ್ರಕಟಿಸಿ ಬಿಸಿಸಿಐಗೆ ಪಾಕಿಸ್ತಾನದ ವಿರುದ್ಧ ಪಂದ್ಯ ಆಯೋಜಿಸುತ್ತಿರುವುದಕ್ಕೆ ನಾಚಿಕೆಯಾಗಬೇಕು ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ. ನಾಳೆಯ ಪಂದ್ಯಕ್ಕೂ ಮೈದಾನದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಭದ್ರತೆ ಒದಗಿಸಲಾಗಿದೆ.