ಕೊಲೊಂಬೊ: ದಾಖಲೆಯ ಟೆಸ್ಟ್ ಪಂದ್ಯವನ್ನು ಎಲ್ಲಾ ಕ್ರಿಕೆಟಿಗರೂ ಸ್ಮರಣೀಯವಾಗಿಸಲು ಇಷ್ಟಪಡುತ್ತಾರೆ. ಅದೇ ಕೆಲಸವನ್ನು ಚೇತೇಶ್ವರ ಪೂಜಾರ ಕೂಡಾ ಮಾಡಿದ್ದಾರೆ.
ಶ್ರೀಲಂಕಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯ ಚೇತೇಶ್ವರ ಪೂಜಾರಗೆ 50 ನೇ ಟೆಸ್ಟ್ ಪಂದ್ಯವಾಗಿತ್ತು. ಅದನ್ನು ಅವರು ಶತಕ ಹೊಡೆದು ಸ್ಮರಣೀಯವಾಗಿಸಿದರು. ದಿನದಂತ್ಯಕ್ಕೆ 126 ರನ್ ನಾಟೌಟ್ ಆಗಿ ಉಳಿದು ರೆಹಾನೆ ಜತೆ ಭಾರತವನ್ನು ಸುರಕ್ಷಿತವಾಗಿ ದಡ ಸೇರಿಸಿದರು.
ಅಜಿಂಕ್ಯಾ ರೆಹಾನೆ ಪೂಜಾರ ಜತೆ ಶತಕ ಹೊಡೆದಿದ್ದು 103 ರನ್ ಗಳಿಸಿ ಅಜೇಯರಾಗಿ ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ಇವರಿಬ್ಬರ ಭರ್ಜರಿ ಬ್ಯಾಟಿಂಗ್ ನಿಂದಾಗಿ ಭಾರತ ಮೊದಲ ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 344 ರನ್ ಗಳಿಸಿ ಬೃಹತ್ ಮೊತ್ತ ಪೇರಿಸುವತ್ತ ಹೆಜ್ಜೆ ಹಾಕಿದೆ.
ಈ ನಡುವೆ ಪೂಜಾರ ಟೆಸ್ಟ್ ಕ್ರಿಕೆಟ್ ನಲ್ಲಿ 4000 ರನ್ ಪೂರೈಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ವೇಗದ 4000 ರನ್ ಗಳಿಸಿದ ದ್ವಿತೀಯ ಬ್ಯಾಟ್ಸ್ ಮನ್ ಎನಿಸಿಕೊಂಡರು. ಸಚಿನ್ ತೆಂಡುಲ್ಕರ್ ಈ ಮೊದಲು ಈ ದಾಖಲೆ ಮಾಡಿದ್ದರು.
ಭಾರತದ ಬ್ಯಾಟ್ಸ್ ಮನ್ ಗಳ ಪೈಕಿ ಕೆಎಲ್ ರಾಹುಲ್ ಮತ್ತೊಮ್ಮೆ ಅರ್ಧಶತಕ ಗಳಿಸಿ ಔಟಾದರು. ಶಿಖರ್ ಧವನ್ 35 ರನ್ ಗಳಿಸಿದರೆ, ನಾಯಕ ಕೊಹ್ಲಿ ಕೇವಲ 13 ರನ್ ಗಳಿಗೆ ತೃಪ್ತಿ ಪಟ್ಟುಕೊಂಡರು.