ಪಲ್ಲಿಕೆಲೆ: ಏಷ್ಯಾ ಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ರೋಚಕ ಪಂದ್ಯ ಮಳೆಯಿಂದಾಗಿ ಯಾವುದೇ ಫಲಿತಾಂಶವಿಲ್ಲದೇ ರದ್ದಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 48.5 ಓವರ್ ಗಳಲ್ಲಿ 266 ರನ್ ಗಳಿಗೆ ಆಲೌಟ್ ಆಯಿತು. ಒಂದು ಹಂತದಲ್ಲಿ ಟೀಂ ಇಂಡಿಯಾ ಸಂಕಷ್ಟದಲ್ಲಿದ್ದಾಗ ಶತಕದ ಜೊತೆಯಾಟವಾಡಿದ ಇಶಾನ್ ಕಿಶನ್-ಹಾರ್ದಿಕ್ ಪಾಂಡ್ಯ ಜೋಡಿ ತಂಡಕ್ಕೆ ಪೈಪೋಟಿಕರ ಮೊತ್ತ ದಾಖಲಿಸಲು ನೆರವಾದರು. ಇಶಾನ್ 82 ರನ್, ಹಾರ್ದಿಕ್ ಪಾಂಡ್ಯ 87 ರನ್ ಗಳಿಸಿ ಔಟಾದರು. ಪಾಕ್ ಪರ ಮಾರಕ ದಾಳಿ ಸಂಘಟಿಸಿದ ಶಾಹಿನ್ ಅಫ್ರಿದಿ 4, ನಸೀಂ ಶಾ, ಹ್ಯಾರಿಸ್ ರೌಫ್ ತಲಾ 3 ವಿಕೆಟ್ ತಮ್ಮದಾಗಿಸಿಕೊಂಡರು.
ಪಲ್ಲಿಕೆಲೆ ಪಿಚ್ ನಲ್ಲಿ ಈ ಮೊತ್ತ ಸಣ್ಣದೇನಾಗಿರಲಿಲ್ಲ. ಇಲ್ಲಿ ಚೇಸ್ ಮಾಡಿದ್ದ ತಂಡ ಇಷ್ಟು ದೊಡ್ಡ ಮೊತ್ತ ಯಶಸ್ವಿಯಾಗಿ ಬೆನ್ನಟ್ಟಿದ ಇತಿಹಾಸವೇ ಇರಲಿಲ್ಲ. ಹೀಗಾಗಿ ಟೀಂ ಇಂಡಿಯಾ ಗೆಲುವಿನ ನಿರೀಕ್ಷೆಯಿತ್ತು. ಆದರೆ ಪಾಕ್ ಸರದಿ ಆರಂಭಕ್ಕೂ ಮುನ್ನ ಆರಂಭವಾದ ಮಳೆ ಬಳಿಕ ಪಂದ್ಯ ನಡೆಯಲು ಅವಕಾಶ ನೀಡಲೇ ಇಲ್ಲ. ಪರಿಣಾಮ ಅಂಪಾಯರ್, ಮ್ಯಾಚ್ ರೆಫರಿಗಳು ಪಂದ್ಯ ರದ್ದುಗೊಳಿಸುವ ತೀರ್ಮಾನಕ್ಕೆ ಬಂದರು. ಇದರೊಂದಿಗೆ ಎರಡೂ ತಂಡಗಳೂ ತಲಾ 1 ಅಂಕ ಹಂಚಿಕೊಂಡವು. ಭಾರತವೀಗ ಮುಂದಿನ ಪಂದ್ಯದಲ್ಲಿ ನೇಪಾಳವನ್ನು ಭಾರೀ ಅಂತರದಿಂದ ಸೋಲಿಸಲೇಬೇಕಾಗಿದೆ.