ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 8 ವಿಕೆಟ್ ಗಳಿಂದ ಗೆದ್ದುಕೊಂಡಿದೆ.
ಭಾರತದ ಈ ಅಭೂತಪೂರ್ವ ಗೆಲುವಿನ ರೂವಾರಿಗಳು ಅರ್ಷ್ ದೀಪ್ ಸಿಂಗ್ ಮತ್ತು ಆವೇಶ್ ಖಾನ್. ಅರ್ಷ್ ದೀಪ್ 5, ಆವೇಶ್ ಖಾನ್ 4 ವಿಕೆಟ್ ಕಬಳಿಸಿ ಆಫ್ರಿಕಾವನ್ನು ಕೇವಲ 116 ರನ್ ಗಳಿಗೆ ಆಲೌಟ್ ಮಾಡಿದ್ದರು. ಈ ಮೊತ್ತ ಬೆನ್ನತ್ತಿದ ಭಾರತ 16.4 ಓವರ್ ಗಳಲ್ಲಿಯೇ 2 ವಿಕೆಟ್ ಕಳೆದುಕೊಂಡು 117 ರನ್ ಗಳಿಸುವ ಮೂಲಕ ಗೆಲುವು ಕಂಡಿತು. ಭಾರತದ ಪರ ಬ್ಯಾಟಿಂಗ್ ನಲ್ಲಿ ಚೊಚ್ಚಲ ಪಂದ್ಯವಾಡಿದ ಸಾಯಿ ಸುದರ್ಶನ್ ದಾಖಲೆಯ ಅರ್ಧಶತಕ (55) ಮತ್ತು ಶ್ರೇಯಸ್ ಅಯ್ಯರ್ 52 ರನ್ ಗಳಿಸಿದರು.
ಇದರೊಂದಿಗೆ ಈ ಗೆಲುವು ಆಫ್ರಿಕಾ ವಿರುದ್ಧ ಭಾರತಕ್ಕೆ ಏಕದಿನ ಪಂದ್ಯಗಳಲ್ಲಿ ಅತೀ ದೊಡ್ಡ ಗೆಲುವುಗಳಲ್ಲಿ ಒಂದಾಯಿತು. 5 ವಿಕೆಟ್ ಕಬಳಿಸಿದ ಅರ್ಷ್ ದೀಪ್ ಸಿಂಗ್ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ನಾಯಕ ಕೆಎಲ್ ರಾಹುಲ್ ಗೆ ಧನ್ಯವಾದ ಸಲ್ಲಿಸಿದರು. ನೀನು ಕಮ್ ಬ್ಯಾಕ್ ಮಾಡಲೇಬೇಕು, ಐದು ವಿಕೆಟ್ ಕೀಳಲೇಬೇಕು ಎಂದು ರಾಹುಲ್ ಭಾಯಿ ನನಗೆ ಹೇಳಿದ್ದರು. ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.