ಅನಿಲ್ ಕುಂಬ್ಳೆ ಭಾರತೀಯ ಕ್ರಿಕೆಟ್ ಕಂಡ ಪ್ರತಿಭಾವಂತ ಕ್ರಿಕೆಟಿಗ. ಕ್ರಿಕೆಟ್ ಆಟದಲ್ಲಿ ಪಕ್ಕಾ ಫ್ರೊಫೆಶನಲ್, ಬದ್ಧತೆಯ ಆಟಗಾರ. ಇದಕ್ಕೆ ಸಾಕ್ಷಿ 2002ರ ವೆಸ್ಟ್ ಇಂಡೀಸ್ ವಿರುದ್ಧದ ಆಂಟಿಗುವಾ ಟೆಸ್ಟ್.
ವೆಸ್ಟ್ ಇಂಡೀಸ್ ವೇಗದ ಬೌಲರ್ ಒಬ್ಬನ ಚೆಂಡು ಕುಂಬ್ಳೆ ದವಡೆಗೆ ಬಿದ್ದು ಗಾಯವಾಗಿತ್ತು. ಗಾಯವಾಗಿದ್ದಷ್ಟೇ ಅಲ್ಲ, ದವಡೆಯ ಮೂಳೆಯೇ ಮುರಿದಿತ್ತು. ಆದರೂ. ಅನಿಲ್ ಕುಂಬ್ಳೆ ಮುರಿದ ದವಡೆಗೆ ಬ್ಯಾಂಡೇಜ್ ಕಟ್ಟಿಕೊಂಡು ಫೀಲ್ಡಿಗಿಳಿದರು. ಫಿಸಿಯೋ ಹೇಳಿದರೂ ಅನಿಲ್ ಕುಂಬ್ಳೆ ಕೇಳಲಿಲ್ಲ. ಅರ್ಧದಲ್ಲೇ ತಂಡವನ್ನ ಬಿಟ್ಟು ಬರುವುದಿಲ್ಲ ಎಂದು ಬಾಲ್ ತಿರುಗಿಸುತ್ತಾ ಫೀಲ್ಡಿಗಿಳಿದೇ ಬಿಟ್ಟರು. 14 ಓವರ್ ಸತತ ಬೌಲ್ ಮಾಡಿದ ಅನಿಲ್ ಕುಂಬ್ಳೆ ಮಹತ್ವದ ಬ್ರಿಯಾನ್ ಲಾರ ವಿಕೆಟ್ ಪಡೆದು ಸೋಲುವ ಹಂತದಲ್ಲಿದ್ದ ಪಂದ್ಯವನ್ನ ಡ್ರಾನತ್ತ ತಿರುಗಿಸಿದರು. ಅಂದು ಮೈದಾನದಲ್ಲಿದ್ದ ಮತ್ತು ಹೊರಗಿದ್ದ ಹಾಲಿ, ಮಾಜಿ ಕ್ರಿಕೆಟಿಗರು ಕುಂಬ್ಳೆ ಬದ್ಧತೆ ಮತ್ತು ಕ್ರಿಕೆಟ್ ಪ್ರೇಮವನ್ನ ಕೊಂಡಾಡಿದರು.
ನಾನು ನನ್ನ ಜೀವಮಾನದಲ್ಲಿ ನೋಡಿದ ಕೆಚ್ಚೆದೆಯ ಕ್ರಿಕೆಟ್ ಇದು ಎಂದು ವಿಂಡೀಸ್`ನ ಕ್ರಿಕೆಟ್ ದಂತಕಥೆ ವಿವಿಎನ್ ರಿಚರ್ಡ್ಸ್ ಬಣ್ಣಿಸಿದ್ದರು. ಮರುದಿನವೇ ಶಸ್ತ್ರಚಿಕಿತ್ಸೆಗೆ ಬೆಂಗಳೂರಿಗೆ ಹೊರಟ ಕುಂಬ್ಳೆ ತಂಡಕ್ಕಾಗಿ ನನ್ನ ಸಾಮರ್ಥ್ಯ ಮೀರಿ ಆಡಿದ ತೃಪ್ತಿ ನನಗಿದೆ ಎಂದು ಹೇಳಿದ್ದರು.
ಇತ್ತೀಚೆಗೆ ಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ ಆಯ್ಕೆ ಬಳಿಕವೂ ಮಾಜಿ ನಾಯಕ ಸೌರವ್ ಗಂಗೂಲಿ, ಅನಿಲ್ ಕುಂಬ್ಳೆಯ ಬದ್ಧತೆಯನ್ನ ಕೊಂಡಾಡಿದ್ದರು. ಟೀಮ್ ಇಂಡಿಯಾದ ಬಿಗ್ಗೆಸ್ಟ್ ಮ್ಯಾಚ್ ವಿನ್ನರ್ ಆಗಿದ್ದ ಕುಂಬ್ಳೆ, ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡಕ್ಕೆ ಸ್ಫೂರ್ತಿ ನೀಡಲಿದ್ದಾರೆ ಎಂದಿದ್ದರು. ಅವರ ಮಾತಿನಂತೆ ಭಾರತ ತಂಡ ಅನಿಲ್ ಕುಂಬ್ಳೆ ಬಂದ ಬಳಿಕ ಬಹುತೇಕ ಎಲ್ಲ ಸರಣಿಗಳಲ್ಲಿ ಗೆಲುವಿನ ನಗೆ ಬೀರಿದೆ.
ಆದರೆ, ವರ್ಷದ ಒಪ್ಪಂದ ಮುಗಿಯುತ್ತಿದ್ದಂತೆ ಅನಿಲ್ ಕುಂಬ್ಳೆ ಕೋಚ್ ಸ್ಥಾನ ತೊರೆದಿದ್ದಾರೆ. ಬಿಸಿಸಿಐ ಅವರನ್ನ ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದೆ. ಈ ಬಗ್ಗೆ ಮಾಜಿ ನಾಯಕರು ಸೇರಿದಂತೆ ಕ್ರಿಕೆಟ್ ಅಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ