ಲಂಡನ್: ಪಾಕಿಸ್ತಾನ ವಿರುದ್ಧ ವಿಶ್ವಕಪ್ ಆಡುವಾಗ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಚಿನ್ ತೆಂಡುಲ್ಕರ್ ನೆನಪಾಗುವುದು ಸಹಜ. ಆದರೆ ಆ ಒಂದು ದೃಶ್ಯ ಕಾವ್ಯ ಮತ್ತೆ ನೆನಪಾಗುವಂತೆ ಮಾಡಿದ್ದು ಇಂದು ರೋಹಿತ್ ಶರ್ಮಾ.
ಪಾಕ್ ಬೌಲರ್ ಗಳ ಪೇಲವ ಬೌಲಿಂಗ್, ಕಳಪೆ ಫೀಲ್ಡಿಂಗ್ ನ ಭರಪೂರ ಲಾಭವೆತ್ತಿದ ರೋಹಿತ್ ಶರ್ಮಾ ತಮ್ಮ ಸುಂದರ ಅಪ್ಪರ್ ಕಟ್, ಡ್ರೈವ್ ಗಳ ಮೂಲಕ ಸಚಿನ್ ನೆನಪಿಸುವ ಇನಿಂಗ್ಸ್ ಆಡಿ ನೆರೆದಿದ್ದ ಭಾರತೀಯ ಪ್ರೇಕ್ಷಕರಲ್ಲಿ ಪುಳಕವೆಬ್ಬಿಸಿದರು. ಮೊದಲ ವಿಕೆಟ್ ಗೆ ರೋಹಿತ್-ರಾಹುಲ್ ಜೋಡಿ 136 ರನ್ ಗಳ ಭರ್ಜರಿ ತಳಪಾಯ ಹಾಕಿತು.
ಈ ಹಂತದಲ್ಲಿ ರಾಹುಲ್ ಸುಲಭ ಕ್ಯಾಚ್ ನೀಡಿ ಭಾರತಕ್ಕೆ ಮೊದಲ ಆಘಾತ ನೀಡಿದರು. ಈ ಸಂದರ್ಭದಲ್ಲಿ ರೋಹಿತ್ ಗೆ ಜತೆಯಾದ ಕೊಹ್ಲಿ ನಿಧಾನಗತಿಯ ಇನಿಂಗ್ಸ್ ಆರಂಭಿಸಿದರು. ರೋಹಿತ್ ಸುಲಭವಾಗಿ ರನ್ ಗಳಿಸುತ್ತಿದ್ದದು ನೋಡಿದರೆ ಅವರು ಇಂದು ಮತ್ತೊಂದು ದ್ವಿಶತಕ ಗಳಿಸಿಬಿಡುತ್ತಾರೇನೋ ಎಂಬ ಭಾವನೆ ಮೂಡಿತ್ತು.
ಆದರೆ ದುರದೃಷ್ಟವಶಾತ್ 140 ರನ್ ಗಳಿಸಿದ್ದಾಗ ಫೈನ್ ಲೆಗ್ ನಲ್ಲಿದ್ದ ಫೀಲ್ಡರ್ ಗಮನಿಸದೇ ಸ್ವೀಪ್ ಶಾಟ್ ಹೊಡೆಯಲು ಹೋಗಿ ಕ್ಯಾಚ್ ಔಟ್ ಆದರು. ಇದಾದ ಬಳಿಕ ಬಡ್ತಿ ಪಡೆದು ಬಂದ ಹಾರ್ದಿಕ್ ಪಾಂಡ್ಯ ರನ್ ಗತಿ ಏರಿಸಲು ಪ್ರಯತ್ನಿಸಿದರು. ಆದರೆ ಸಿಕ್ಸರ್ ಹೊಡೆಯುವ ಭರದಲ್ಲಿ ಅವರೂ (19 ಎಸೆತಗಳಲ್ಲಿ 26 ರನ್) ಔಟಾದರು. ಈ ನಡುವೆ ನಾಯಕ ವಿರಾಟ್ ಕೊಹ್ಲಿ ತಮ್ಮ ಅರ್ಧಶತಕ ಪೂರೈಸಿದರು. ಅಲ್ಲದೆ ಏಕದಿನ ಪಂದ್ಯಗಳಲ್ಲಿ ಅತೀ ವೇಗದ 11 ಸಾವಿರ ರನ್ ಗಳಿಸಿದ ದಾಖಲೆಯನ್ನೂ ಮಾಡಿದರು.
ಆದರೆ ಈ ನಡುವೆ ಮಳೆ ಬಂದು ಪಂದ್ಯ ಸ್ಥಗಿತಗೊಂಡಿತು. ಈ ಸಂದರ್ಭದಲ್ಲಿ ಭಾರತ 4 ವಿಕೆಟ್ ಕಳೆದುಕೊಂಡು 46.4 ಓವರ್ ಗಳಲ್ಲಿ 305 ರನ್ ಗಳಿಸಿತ್ತು. ಕೊಹ್ಲಿ 71 ಮತ್ತು ವಿಜಯ್ ಶಂಕರ್ 3 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು.