ವಡೋದರ: ಕೊರೋನಾ ಎಂಬ ಮಹಾಮಾರಿ ಮನುಷ್ಯ ಮನುಷ್ಯರ ನಡುವಿನ ನಂಬಿಕೆಯನ್ನೇ ಇಲ್ಲವಾಗುವಂತೆ ಮಾಡಿದೆ. ಇದೀಗ ಗುಜರಾತ್ ನ ವಡೋದರಲ್ಲಿ ಪತಿರಾಯನೊಬ್ಬ ಕೊರೋನಾ ಭಯದಲ್ಲಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಮನೆಯಿಂದ ಹೊರಗಟ್ಟಿದ ಧಾರುಣ ಘಟನೆ ನಡೆದಿದೆ.
ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಪತಿಯ ತಾಯಿಯನ್ನು ನೋಡಿಕೊಳ್ಳಲು ಪತ್ನಿ ಎರಡು ವಾರ ಆಸ್ಪತ್ರೆಯಲ್ಲಿ ತಂಗಿದ್ದಳು. ಈ ವೇಳೆ ಆಕೆಯ ಮಕ್ಕಳೂ ಜತೆಯಿದ್ದರು. ಆದರೆ ಮನೆಗೆ ಬಂದ ಮೇಲೆ ಆಕೆಗೆ ಜ್ವರ ಮತ್ತು ಉಸಿರಾಟದ ಸಮಸ್ಯೆ ಕಂಡುಬಂದಿದ್ದರಿಂದ ಆಕೆಗೆ ಕೊರೋನಾ ತಗುಲಿರಬಹುದು ಎಂದು ಶಂಕಿಸಿದ ಪತಿ ಮಹಾಶಯ ನಿರ್ದಾಕ್ಷಿಣ್ಯವಾಗಿ ಆಕೆಯನ್ನು ಮನೆಯಿಂದ ಹೊರಗಟ್ಟಿದ್ದಾನೆ.
ಮೇಯಲ್ಲಿ ಆರೋಪಿ ಪತ್ನಿಯನ್ನು ಮನೆಯಿಂದ ಹೊರ ಹಾಕಿದ್ದ. ಅದಾದ ಬಳಿಕ ಆಕೆ ಸುಮಾರು ಒಂದು ತಿಂಗಳು ಅಹಮ್ಮದಾಬಾದ್ ನಲ್ಲಿರುವ ಅವರ ಇನ್ನೊಂದು ಮನೆಯಲ್ಲಿ ವಾಸ ಮಾಡುತ್ತಿದ್ದಳು. ಆದರೆ ಜೂನ್ 29 ರಂದು ಅಲ್ಲಿಗೂ ಬಂದ ಪತಿ ಅಲ್ಲಿಂದಲೂ ಜಾಗ ಖಾಲಿ ಮಾಡುವಂತೆ ಒತ್ತಾಯಿಸಿದ್ದ. ಅಲ್ಲದೆ, ಆಕೆಗೆ ವಿಚ್ಛೇದನ ಪತ್ರ ನೀಡಿದ್ದ. ಇದರಿಂದ ಎಚ್ಚೆತ್ತುಕೊಂಡ ಆಕೆ ಪೊಲೀಸರಿಗೆ ಪತಿಯ ದುರ್ವರ್ತನೆ ಬಗ್ಗೆ ದೂರು ನೀಡಿದ್ದಾಳೆ. ಇದೀಗ ಪತಿಯ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.