ಬರದಿಂದ ಕಂಗೆಟ್ಟು ಹೋಗಿದ್ದ ಉತ್ತರ ಕರ್ನಾಟಕದ ಕೆಲ ಹಳ್ಳಿಗಳ ಮಂದಿಯ ನೋವಿಗೆ ನಟ ಯಶ್ ಅವರು ಸ್ಪಂದಿಸಿದ್ದರು. ತಮ್ಮ ಯಶೋ ಮಾರ್ಗ ಫೌಂಡೇಷನ್ ಮೂಲಕ ಅಲ್ಲಿನಹಳ್ಳಿಗಳ ಜನರಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿ ಅವರ ನೀರಿನ ದಾಹ ತೀರಿಸಿದ್ದರು. ಇದೀಗ ಯಶ್ ತಾನು ರಿಯಲ್ ಲೈಫ್ ನಲ್ಲೂ ಹೀರೋ ಅನ್ನೋದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಮೊನ್ನೆ ತಾನೇ ಪಿಯುಸಿ ಫಲಿತಾಂಶ ಹೊರಬಂದಿದೆ. ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಆದ್ರೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಕಿವಿ ಮಾತೊಂದನ್ನು ಫೇಸ್‌ಬುಕ್ ಮೂಲಕ ಹೇಳಿದ್ದಾರೆ. ನಿನ್ನೆಯಷ್ಟೇ ಪಿಯುಸಿ ರಿಸಲ್ಟ್ ಬಂದಿದೆ. ಅನೇಕರು ಗೆದ್ದಿದ್ದೀರಿ, ಸಂತೋಷಪಟ್ಟಿದ್ದೀರಿ. ಕೆಲವರಿಗೆ ಅಂದುಕೊಂಡಷ್ಟು ಸಾಧಿಸಲಾಗಿರುವುದಿಲ್ಲ.ಇನ್ನು ಕೆಲವರು ನಾನಾ ಕಾರಣಕ್ಕೆ ನಿರಾಶೆ ಹೊಂದಿರುತ್ತೀರಿ. ಆದರೆ, ನೆನಪಿಡಿ, ಸೋಲು ಎಂಬುದು ನಿಮ್ಮ ಬದುಕಿನ ಸೋಲಲ್ಲ, ಬದುಕನ್ನೇ ಕಳೆದುಕೊಳ್ಳುವಷ್ಟು ದೊಡ್ಡ ನಿರಾಶೆಯಲ್ಲ. ಧೈರ್ಯ ಕೆಡಬೇಡಿ ಅಂತಾ ಅವರು ಹೇಳಿದ್ದಾರೆ.
ಅಲ್ಲದೇ ನಡೆದುಹೋಗಿರುವುದು ಬರೀ ಒಂದು ಪರೀಕ್ಷೆ. ಅದೇ ಅಂತಿಮ ಅಲ್ಲ. ನಿರಾಶೆ ಬೇಡ, ನಾಳೆ ದೊಡ್ಡದೊಂದು ಯಶಸ್ಸು ನಿಮಗಾಗಿ ಕಾದಿದೆ. ಕಾಲ ಬದಲಾಗುತ್ತಲೇ ಇರುತ್ತದೆ, ತಾಳಿ ನಿಂತವನಿಗೆ ಗೆಲುವಿದೆ. ಹೆತ್ತವರೇ, ಮಕ್ಕಳನ್ನು ಕಡಿಮೆ ಮಾರ್ಕ್ಸ್ ತೆಗೆದುಕೊಂಡ ಕಾರಣಕ್ಕೆ ಬೈಯಬೇಡಿ. ಮಕ್ಕಳೇ, ಪರೀಕ್ಷೆಯಲ್ಲಿ ಮಾರ್ಕ್ಸ್ ಕಡಿಮೆ ಬಂತೆಂದು ಕುಗ್ಗಬೇಡಿ.
ಬದುಕಿಗಿಂತ ಯಾವುದೂ ದೊಡ್ಡದಲ್ಲ. ಪರೀಕ್ಷೆಯಲ್ಲಿ ಗೆದ್ದವರು ಮಾತ್ರ ಜಾಣರಲ್ಲ. ಇಂಗ್ಲಿಷ್ ಗೊತ್ತಿಲ್ಲದವರೆಲ್ಲ ದಡ್ಡರಲ್ಲ. ಚಿಯರ್ ಅಪ್. ಸ್ಮೈಲ್ ಎದ್ದು ನಿಂತು ಸುತ್ತಲೂ ನೋಡಿ. ಜಗತ್ತು ಸುಂದರವಾಗಿದೆ, ವಿಶಾಲವಾಗಿದೆ. ನಡೆಯಲು ಸಿದ್ಧನಾದವನಿಗೆ ನೂರಾರು ದಾರಿಯಿದೆ ಅಂತಾ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದಾರೆ.