ಮುಂಬೈ: ಕಿಚ್ಚ ಸುದೀಪ್ ನಾಯಕರಾಗಿದ್ದ ಸ್ಪರ್ಶ ಸಿನಿಮಾದ ಚಂದಕಿಂತ ಚಂದ ನೀನೆ ಸುಂದರ ಎಂಬ ಸೂಪರ್ ಹಿಟ್ ಹಾಡು ಹಾಡಿದ್ದ ಗಾಯಕ ಪಂಕಜ್ ಉಧಾಸ್ ಇನ್ನು ನೆನಪು ಮಾತ್ರ.
ಅವರಿಗೆ 73 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಅವರ ಪುತ್ರಿ ನಯಾಝ್ ಉಧಾಸ್ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಗಝಲ್ ಶೈಲಿಯ ಹಾಡುಗಳಿಗೆ ಅವರು ಪ್ರಖ್ಯಾತರಾಗಿದ್ದರು.
ಕನ್ನಡದಲ್ಲಿ ಅವರು ಹಾಡಿದ ಚಂದಕಿಂತ ಚಂದ ಹಾಡನ್ನು ಯಾರು ತಾನೆ ಮರೆಯಲು ಸಾಧ್ಯ? ಅಲ್ಲದೆ ಅದೇ ಸಿನಿಮಾದಲ್ಲಿ ಬರೆಯದ ಮೌನದ ಕವಿತೆ ಹಾಡಾಯಿತು ಎಂಬ ಮತ್ತೊಂದು ಸೂಪರ್ ಹಿಟ್ ಹಾಡು ಕೊಟ್ಟಿದ್ದರು. ಈ ಹಾಡುಗಳು ಎಂದೆಂದಿಗೂ ಕನ್ನಡಿಗರ ಮರೆಯಲಾಗದಂತಹ ಹಾಡುಗಳು.1951 ರಲ್ಲಿ ಗುಜರಾತ್ ನಲ್ಲಿ ಜನಿಸಿದ ಪಂಕಜ್ ಉಧಾಸ್ 1980 ರಲ್ಲಿ ಗಝಲ್ ಹಾಡಿನ ಆಲ್ಬಂ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದರು.
ಹಿಂದಿಯಲ್ಲಿ ಚಿಟ್ಟೀ ಆಯೀ ಹೇ,ಅವರಿಗೆ ಬ್ರೇಕ್ ನೀಡಿದ ಹಾಡು. ತಮ್ಮ ಸುಮಧುರ ಕಂಠದ ಹಾಡುಗಳಿಗೆ ಫಿಲಂ ಫೇರ್, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನೂ ಪಡೆದಿದ್ದರು. ಅಲ್ಲದೆ ಭಾರತ ಸರ್ಕಾರ ಪದ್ಮ ಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ನಿಧನಕ್ಕೆ ಅಭಿಮಾನಿಗಳು, ಸಿನಿಮಾ ಸೆಲೆಬ್ರಿಟಿಗಳು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.