ಕರಾವಳಿ ಸುಂದರಿ ಶಿಲ್ಪಾ ಶೆಟ್ಟಿ ಮೆಲ್ಲನೆ ಸಹಜ ಜೀವನಕ್ಕೆ ಮರಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗುತ್ತಿದ್ದಾರೆ. ಪತಿ ರಾಜ್ ಕುಂದ್ರಾ ಅಶ್ಲೀಲ ಸಿನಿಮಾಗಳ ನಿರ್ಮಾಣ ಹಾಗೂ ಮೊಬೈಲ್ ಅಪ್ಲಿಕೇಷನ್ಗಳಲ್ಲಿ ಪ್ರಸಾರ ಮಾಡಿರುವ ಪ್ರಕರಣದಲ್ಲಿ ಜೈಲು ಸೇರಿದ ನಂತರ ಶಿಲ್ಪಾ ಶೆಟ್ಟಿ ನ್ಯಾಯಾಲಯ ಸುತ್ತ ಸುತ್ತುತ್ತಿದ್ದರು. ಆದರೆ ಈಗ ಎಂದಿನಂತೆ ತಮ್ಮ ಚಿತ್ರೀಕರಣ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ.
ಇತ್ತೀಚೆಗಷ್ಟೆ ಸೂಪರ್ ಡ್ಯಾನ್ಸರ್ ರಿಯಾಲಿಟಿ ಶೋಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಶಿಲ್ಪಾ ಶೆಟ್ಟಿ ತೀರ್ಫುಗಾರರಾಗಿ ಈ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಪತಿ ರಾಜ್ ಕುಂದ್ರಾ ಬಂಧನವಾದಾಗಿನಿಂದ ಈ ಕಾರ್ಯಕ್ರಮದಲ್ಲಿ ಅವರು ಶೂಟಿಂಗ್ಗೆ ಗೈರಾಗಿದ್ದರು. ರಾಜ್ ಕುಂದ್ರಾ ಅರೆಸ್ಟ್ ಆದ ನಂತರ ಇದೇ ಮೊದಲ ಬಾರಿಗೆ ಶಿಲ್ಪಾ ಶೆಟ್ಟಿ ಸೂಪರ್ ಡ್ಯಾನ್ಸರ್ ಶೋ ಸೆಟ್ಗೆ ಕಾಲಿಡುವ ಮೂಲಕ ಸುದ್ದಿಯಲ್ಲಿದ್ದರು. ಈಗ ಇದೇ ನಟಿ ಶಿಲ್ಪಾ ಶೆಟ್ಟಿ ಇನ್ಸ್ಟಾಗ್ರಾಂ ಸ್ಟೋರೀಸ್ನಲ್ಲಿ ಮಾಡಿರುವ ಒಂದು ಪೋಸ್ಟ್ ಸದ್ದು ಮಾಡುತ್ತಿದೆ. ಹೌದು, ಶಿಲ್ಪಾ ಶೆಟ್ಟಿ ತನ್ನಿಂದ ತಪ್ಪಾಗಿದೆ ಎಂದು ಬರೆದುಕೊಂಡಿದ್ದಾರೆ.
ಶಿಲ್ಪಾ ಶೆಟ್ಟಿ ಇನ್ಸ್ಟಾಗ್ರಾಂ ಸ್ಟೋರೀಸ್
ಶಿಲ್ಪಾ ಶೆಟ್ಟಿ ಇನ್ಸ್ಟಾಗ್ರಾಂ ಸ್ಟೋರೀಸ್ನಲ್ಲಿ ಹಂಚಿಕೊಂಡಿರುವ ಫೋಟೋ ಒಂದು ಪುಸ್ತಕದ ಪುಟದ್ದಾಗಿದೆ. ಇದರ ಮೇಲೆ ನಾನು ತಪ್ಪು ಮಾಡಿದ್ದೇನೆ. ಆದರೆ, ಪರವಾಗಿಲ್ಲ ಎಂದು ಆ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಅವರು ಹೀಗೆ ಬರೆದುಕೊಂಡ ನಂತರ, ಶಿಲ್ಪಾ ಮಾಡಿದ ತಪ್ಪಾದರೂ ಏನು ಅನ್ನೋ ಚರ್ಚೆ ಆರಂಭವಾಗಿದೆ. ನೆಟ್ಟಿಗರು ಶಿಲ್ಪಾ ಹೀಗೆ ಬರೆದ ಹಿಂದಿನ ಕಾರಣಕ್ಕಿಂತ ಹೆಚ್ಚಾಗಿ, ಅವರು ಮಾಡಿರುವ ತಪ್ಪು ಏನು ಅಂತ ತಲೆ ಕೆಡಿಸಿಕೊಂಡಿದ್ದಾರೆ.
ಹೀಗೆಯೇ ಈ ಹಿಂದೆಯೂ ಶಿಲ್ಪಾ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ರಾಜ್ ಕುಂದ್ರಾ ಅವರು ಜೈಲಿಗೆ ಹೋದ ನಂತರ ಮಾಡಿದ್ದ ಪೋಸ್ಟ್ನಲ್ಲಿ ಶಿಲ್ಪಾ ಶೆಟ್ಟಿ, ತನಗೆ ನ್ಯಾಯ ವ್ಯವಸ್ಥೆ ಹಾಗೂ ಪೊಲೀಸರ ಮೇಲೆ ನಂಬಿಕೆ ಇದೆ. ನ್ಯಾಯ ಸಿಗುತ್ತದೆ ಹಾಗೂ ಸತ್ಯ ಹೊರ ಬರುತ್ತದೆ. ಹೀಗಾಗಿ ಅಲ್ಲಿಯವರೆಗೆ ಊಹಾಪೋಹಗಳು ಹಾಗೂ ಸುಳ್ಳು ಸುದ್ದಿಗಳಿಗೆ ಕಮೆಂಟ್ ಮಾಡಬೇಡಿ. ನನ್ನ ಹಾಗೂ ನನ್ನ ಮಕ್ಕಳ ಖಾಸಗಿತನವನ್ನು ಗೌರವಿಸಿ ಎಂದು ಮನವಿ ಮಾಡಿದ್ದರು.
ಅಶ್ಲೀಲ ಸಿನಿಮಾಗಳ ನಿರ್ಮಾಣ ಹಾಗೂ ಮೊಬೈಲ್ ಅಪ್ಲಿಕೇಷನ್ಗಳಲ್ಲಿ ಪ್ರಸಾರ ಮಾಡಿದ ಆರೋಪದ ಮೇಲೆ ಉದ್ಯಮಿ ರಾಜ್ ಕುಂದ್ರಾ ಅವರನ್ನು ಜುಲೈ 19ರಂದು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ವಶಕ್ಕೆ ಪಡೆದಿದ್ದರು. ರಾಜ್ ಕುಂದ್ರಾ ಒಡೆತನದ ಆ್ಯಪ್ಗಳಲ್ಲಿ 51 ಅಶ್ಲೀಲ ಸಿನಿಮಾಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ರಾಜ್ ಕುಂದ್ರಾ ಬಂಧನದ ನಂತರವೂ ಮುಂಬೈ ಪೊಲೀಸರು ಶಿಲ್ಪಾ ಶೆಟ್ಟಿ ಅವರ ಮನೆಗೆ ಹೋಗಿ ವಿಚಾರಣೆ ಹಾಗೂ ತನಿಖೆ ನಡೆಸಿದ್ದಾರೆ.
ರಾಜ್ ಕುಂದ್ರಾ ಅವರನ್ನು ಮೊದಲಿಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಈ ನಡುವೆ ರಾಜ್ ಕುಂದ್ರಾ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು. ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾ ಅವರನ್ನು ಬಂಧಿಸಿರುವುದು ಕಾನೂನು ಬಾಹಿರವಾಗಿದೆ ಎಂದು ವಕೀಲರು ವಾದಿಸಿದ್ದರು. ಇನ್ನು ಇದೇ ವೇಳೆ ಸರ್ಕಾರಿ ಪರ ವಕೀಲರು ರಾಜ್ ಕುಂದ್ರಾ ಅವರು ಪ್ರಕರಣಕ್ಕೆ ಸಂಬಂಧಿಸಿದಂತಹ ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆ ಎಂದು ಆರೋಪಿಸಿದ್ದರು. ರಾಜ್ ಕುಂದ್ರಾ ಅವರ ಬಂಧನ ಕಾನೂನಿನ ಪ್ರಕಾರವೇ ಮಾಡಲಾಗಿದೆ ಎಂದು ನ್ಯಾಯಾಲಯ ತಿಳಿಸಿತ್ತು.