ಮುಂಬೈ: ಇಂದು ಇಹಲೋಕ ತ್ಯಜಿಸಿರುವ ಭಾರತ ರತ್ನ ಲತಾ ಮಂಗೇಶ್ಕರ್ ಸಾವು ನಿಜಕ್ಕೂ ದೇಶಕ್ಕೆ ಬಹುದೊಡ್ಡ ನಷ್ಟ. ಲತಾ ಹಾಡುಗಳೆಂದರೆ ನಮ್ಮ ಹೆಮ್ಮೆಯ ಸೈನಿಕರಿಗೂ ಸ್ಪೂರ್ತಿಯಾಗುತ್ತಿತ್ತು. ಅವರ ಮಧುರ ಕಂಠದ ಹಾಡುಗಳನ್ನು ಇಷ್ಟಪಡದವರೇ ಇರಲಿಲ್ಲ.
ಹಾಡಿಗೆ ಭಾವ ತುಂಬಿ ಹಾಡುತ್ತಿದ್ದ ಲತಾ ಹಾಡಿದ ಏ ಮೇರೆ ವತನ್ ಕೆ ಲೋಗೋಂ ಹಾಡು ಎಂದೆಂದಿಗೂ ನಮಗೆ, ದೇಶ ಕಾಯುವ ಸೈನಿಕರಿಗೆ ಸ್ಪೂರ್ತಿಯಾಗುತ್ತಿತ್ತು. ಈ ಹಾಡು ಕೇಳಿ ಹಿಂದೊಮ್ಮೆ ಪ್ರಥಮ ಪ್ರಧಾನಿ ಜವಹರ ಲಾಲ್ ನೆಹರೂ ಕಂಗಳಲ್ಲಿ ನೀರು ತುಂಬಿಕೊಂಡಿದ್ದರಂತೆ.
ಸೈನಿಕರಿಗೆ ಹಾಡಿನ ಮೂಲಕ ಮಾತ್ರವಲ್ಲದೆ, ತಮ್ಮ ನಡೆ, ನುಡಿಗಳ ಮೂಲಕವೂ ಸದಾ ಸ್ಪೂರ್ತಿ ತುಂಬುತ್ತಿದ್ದ ಲತಾ ದೀದಿಗೆ ಕ್ರಿಕೆಟ್ ಎಂದರೂ ಅಷ್ಟೇ ಇಷ್ಟವಾಗಿತ್ತು. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರಿಗೆ ಅಚ್ಚುಮೆಚ್ಚಿನ ಆಟಗಾರರಾಗಿದ್ದರು. ದೇಶದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಲತಾ ಕಳೆದುಕೊಂಡಿದ್ದು ಇಂದು ಎಲ್ಲರಿಗೂ ದುಃಖ ತಂದಿದೆ. ಅವರ ನಿಧನಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಇಡೀ ರಾಷ್ಟ್ರವೇ ಕಂಬನಿ ಮಿಡಿದಿದೆ.