'ಏ ಮೇರೆ ವತನ್ ಕೆ ಲೋಗೋ, ಝರಾ ಆಂಖ್ ಮೇ ಬರ್ ಲೋ ಪಾನಿ' ಈ ಗೀತೆಯನ್ನ ಎಂದಾದರು ಮರೆಯೋಕೆ ಸಾಧ್ಯವೆ.. ಖಂಡಿತಾ ಇಲ್ಲ. ಒಮ್ಮೆ ಹಾಡು ಕೇಳಿದರೆ ಮೈಯಲ್ಲಿ ವಿದ್ಯುತ್ ಸಂಚರಿಸಿದ ಅನುಭವವಾಗುತ್ತೆ. ಕಣ್ಣಾಲಿ ತೇವವಾಗುತ್ತೆ. ಈ ಹಾಡು ಇಲ್ಲಿ ನೆನೆಪು ಮಾಡಿಕೊಳ್ಳೋಕೆ ಕಾರಣ ಇದೆ. ಇವತ್ತು ಗೀತ ಸಾಮಾಜ್ಞೆ, ಗಾನ ಕೋಗಿಲೆ, ಭಾರತರತ್ನ ಲತಾ ಮಂಗೇಶ್ಕರ್‌ರವರ 89ನೇ ಹುಟ್ಟುಹಬ್ಬ.
ಸೆ. 28, 1929ರಂದು ಜನಿಸಿದ ಲತಾ ಮಂಗೇಶ್ಕರ್, ಭಾರತದ ಪ್ರಸಿದ್ಧ ಗಾಯಕಿಯರಲ್ಲಿ ಒಬ್ಬರು. ಹಿಂದಿ ಚಿತ್ರರಂಗದಲ್ಲಿ ಬಹಳ ಹಾಡುಗಳನ್ನು ಹಾಡಿರುವುದಲ್ಲದೆ ಹಲವು ಭಾರತೀಯ ಭಾಷೆಗಳಲ್ಲೂ ಹಾಡಿರುವ ಹೆಗ್ಗಳಿಕೆ ಇವರದ್ದು. 1967ರಲ್ಲಿ ಬಿಡುಗಡೆಯಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕನ್ನಡ ಚಿತ್ರದಲ್ಲಿ "ಬೆಳ್ಳನೆ ಬೆಳಗಾಯಿತು" ಹಾಡಿಗೂ ಧನಿಯಾಗಿದ್ದಾರೆ.
ಶಾಸ್ತ್ರೀಯ ಸಂಗೀತಗಾರ, ರಂಗ-ನಟ ಪಂಡಿತ್ ದೀನಾನಾಥ್ ಮಂಗೇಶ್ಕರ್ ಅವರ ಪುತ್ರಿ, ಲತಾ ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದರು. ಲತಾರಿಗೆ ತಂದೆಯೇ ಮೊದಲ ಗುರು. ಲತಾರ ಹುಟ್ಟು ಹೆಸರು ಹೇಮಾ. ಭಾವ್ ಬಂಧನ್ ನಾಟಕದಲ್ಲಿ ಮಾಡಿದ ಅಭಿನಯಿಸಿದ ನಂತರ 'ಲತಾ' ಎಂದಾಯಿತು. ಲತಾರಿಗೆ ಔಪಚಾರಿಕ ಶಿಕ್ಷಣವೇನೂ ಕಲಿತಿಲ್ಲ. ಆದರೂ ಸಂಗೀತದ ಮೇಲಿನ ಆಗಾಧ ಪ್ರೀತಿ, ಶ್ರದ್ಧೆ ಅವರನ್ನು ಇಂದು ಈ ಮಟ್ಟಕ್ಕೆ ತಂದಿದೆ.
ಲತಾ ದೀದಿ ಸಂಗೀತ ಬದುಕು
ಲತಾ ಅವರು ಬಹುಶಃ ಹಿಂದಿಯ ಪ್ರತಿಯೊಬ್ಬ ಸಂಗೀತ ನಿರ್ದೇಶಕರ ಜೊತೆಯೂ ಕೆಲಸ ಮಾಡಿದ್ದಾರೆ. ಹಿಂದಿಯ ಪ್ರತಿಯೊಬ್ಬ ಗಾಯಕನ ಜೊತೆಯೂ ಹಾಡಿದ್ದಾರೆ. ಹಿಂದಿ ಚಿತ್ರರಂಗದ ಬಹುತೇಕ ನಟಿಯಾರಿಗಾಗಿ ಲತಾ ಹಾಡಿದ್ದಾರೆ. ಐವತ್ತರ ದಶಕದಲ್ಲಿ ಮೇಲೇರಿದ ಅವರ ಕೀರ್ತಿ ಪತಾಕೆ ಕೆಳಕ್ಕೆ ಇಳಿಯಲೇ ಇಲ್ಲ. ಗಜಲ್, ಪ್ರೇಮಗೀತೆ, ಭಜನೆ, ಜಾನಪದ ಗೀತೆ, ಯುಗಳಗೀತೆ, ಕ್ಲಬ್ ಸಾಂಗ್ ... ಹೀಗೆ ಪ್ರತಿಯೊಂದೂ ಬಗೆಯ ಹಾಡುಗಳನ್ನು ಲತಾ ಹಾಡಿದ್ದಾರೆ. ಹಿಂದಿ ಚಿತ್ರರಂಗದಲ್ಲಿ "ಲತಾ ದೀದಿ" ಎಂದೇ ಖ್ಯಾತಿ ಪಡೆದಿದ್ದಾರೆ. ಲತಾ ಅವರು ಮದುವೆಯಾಗದೆ ತಮ್ಮ ಜೀವನವನ್ನು ಸಂಗೀತಕ್ಕೇ ಮುಡಿಪಾಗಿಟ್ಟರು.
10 ಸಾವಿರಕ್ಕೂ ಹೆಚ್ಚು ಹಾಡುಗಳನ್ನು 22 ಭಾಷೆಗಳಲ್ಲಿ ಹಾಡಿದ್ದಾರೆ. ಆದರೂ ಅವರ ಸಂಗೀತ ಆಸಕ್ತಿ ಮಾತ್ರ ಕುಗ್ಗಿಲ್ಲ.
ಲತಾರ ಫೇವರಿಟ್ ಹಾಡುಗಳು ಯಾವುದು ಗೊತ್ತಾ…?
ಲತಾರಿಗೆ ಅವರೇ ಹಾಡಿರುವ ಅಷ್ಟೊಂದು ಹಾಡುಗಳು ಪೈಕಿ ಆರು ಹಾಡುಗಳು ತುಂಬಾ ಇಷ್ಟವಂತೆ. 1949ರಲ್ಲಿ ತೆರೆಕಂಡ ಮಹಲ್ ಚಿತ್ರದ ಆಯೇಗಾ ಆನೆವಾಲಾ, 1958ರಲ್ಲಿ ರಿಲೀಸ್ ಆದ ಮಧುಮತಿ ಚಿತ್ರದ ಆಜಾ ರೇ ಪರದೇಸಿ, 1964ರಲ್ಲಿ ಬಿಡುಗಡೆಯಾದ ವೋಹ್ ಕೌನ್ ತಿ ಚಿತ್ರದ ಲಗ್ ಜಾ ಗಾಲೆ, 1961ರಲ್ಲಿ ತೆರೆಕಂಡ ಹಮ್ ದೋನೊ ಚಿತ್ರದ ಅಲ್ಲಾ ತೇರ ನಾಮ್, 1991ರಲ್ಲಿ ರಿಲೀಸ್ ಆದರ ಲೇಕಿನ್ ಚಿತ್ರದ ಸುನಿಯೋಜಿ ಆರಜ್ ಮಾರಿ ಮತ್ತು ಬೆಂಗಾಲಿ ಭಾಷೆಯಲ್ಲಿ ಹಾಡಿದ ಕೇನೊ ಕಿಚ್ಚು ಕೋತ ಬೋಲೊ ನಾ ಹಾಡುಗಳು ಅವರಿಗೆ ಬಹಳ ಇಷ್ಟವಂತೆ. ಇದನ್ನು ಅವರೇ ಸ್ವತಃ ಲಿಸ್ಟ್ ಮಾಡಿದ್ದಾರೆ.
ಅದೇನೆ ಇರಲಿ.. ಸಂಗೀತಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಈ ಸುಪ್ರಸಿದ್ಧ ಗಾಯಕಿ, ಜೀವಂತ ದಂತಕತೆಯ ಬಗ್ಗೆ ಹೆಮ್ಮೆ ಪಡಲೇಬೇಕು. ಮೆನಿ ಮೋರ್ ಹ್ಯಾಪಿ ರಿಟರ್ನ್ಸ್ ಆಫ್ ದಿ ಡೇ ಲತಾ ದೀದಿ....