ಅಡಿಗೆ ಮನೆ ಎಂದರೆ ಕೇವಲ ಆಹಾರ ತಯಾರಿಸಿ ಸೇವನೆ ಮಾಡುವ ಸ್ಥಳವಲ್ಲ , ನಮ್ಮ ಆರೋಗ್ಯವನ್ನು ಕಾಪಾಡುವ ಶಕ್ತಿ ಕೇಂದ್ರ ಎಂದರೆ ತಪ್ಪಾಗಲಾರದು. ಇದು ನಮ್ಮ ಎಲ್ಲ ಸೌಂದರ್ಯ ಮತ್ತು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಗುಣಪಡಿಸುವ ನೈಸರ್ಗಿಕ ಪರಿಹಾರಗಳನ್ನು ಹೇರಳವಾಗಿ ಹೊಂದಿರುವ ಸ್ಥಳ.
ಹಳದಿ ಮತ್ತು ಮೊಸರಿನಿಂದ ಶುಂಠಿ ಮತ್ತು ಬೆಳ್ಳುಳ್ಳಿಯವರೆಗೆ, ನಾವು ಅಡುಗೆಮನೆಯ ಎಲ್ಲಾ ಪದಾರ್ಥಗಳನ್ನು ಔಷಧವಾಗಿ ಬಳಕೆ ಮಾಡಬಹುದು. ಇಲ್ಲಿ ವಿಶೇಷವಾಗಿ ಬೆಳ್ಳುಳ್ಳಿಯ ಬಗ್ಗೆ ಹೇಳುವುದಾದರೇ, ಇದನ್ನು ಕೇವಲ ನಮ್ಮ ಆಹಾರಕ್ಕೆ ಪರಿಮಳವನ್ನು ನೀಡಲು ಮಾತ್ರ ಬಳಸಲಾಗುವುದಿಲ್ಲ, ಆದರೆ ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಬೆಳ್ಳುಳ್ಳಿಯು ಹಲವಾರು ರೋಗಗಳನ್ನು ಗುಣಪಡಿಸಲು ಸಹಾಯ ಮಾಡುವ ವೈದ್ಯಕೀಯ ಗುಣಗಳನ್ನು ಹೊಂದಿದೆ.
ಬೆಳ್ಳುಳ್ಳಿಯಲ್ಲಿ ಅಲ್ಲಿಸಿನ್, ಸಲ್ಫರ್, ಸತು ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ, ಇದು ಸೌಂದರ್ಯದ ಪ್ರಯೋಜನಗಳನ್ನು ಹಾಗೂ ಆ್ಯಂಟಿಬಯಾಟಿಕ್ ಮತ್ತು ಆಂಟಿಫಂಗಲ್ ಗುಣಗಳನ್ನು ಹೊಂದಿದೆ. ಇದು ಕೂದಲು ಮತ್ತು ಚರ್ಮಕ್ಕೂ ಪ್ರಯೋಜನಕಾರಿ. ಹೇಗೆ ಎಂಬುದು ಇಲ್ಲಿದೆ.
ನಾವು ಯಾವಾಗಲೂ ಕೂದಲು ಉದುರುವುದರ ಬಗ್ಗೆ ಹೆಚ್ಚು ಕಾಳಜಿವಹಿಸುತ್ತೇವೆ. ಅದನ್ನು ಗುಣಪಡಿಸಲು ಯಾವ ಉತ್ಪನ್ನಗಳನ್ನು ಬಳಸಬೇಕೆಂದು ಯೋಚಿಸುತ್ತೇವೆ. ನಾವು ಹಲವಾರು ಉತ್ಪನ್ನಗಳನ್ನು ಮತ್ತು ಮನೆಯಲ್ಲಿ ತಯಾರಿಸಿದ ಮಾಸ್ಕ್ಗಳನ್ನು ಪ್ರಯತ್ನಿಸಿದರೂ ಸಹ ಅದು ಏನೂ ಕೆಲಸ ಮಾಡುವುದಿಲ್ಲ. ಹಾಗಾದ್ರೆ , ಈಗ, ಬೆಳ್ಳುಳ್ಳಿಯನ್ನು ಪ್ರಯತ್ನಿಸಿ ನಿಮ್ಮ ಕೂದಲಿನ ಮೇಲೆ ಮ್ಯಾಜಿಕ್ ಮಾಡುವುದನ್ನು ನೋಡಿ.
ಇಂಡಿಯನ್ ಜರ್ನಲ್ ಆಫ್ ಡರ್ಮಟಾಲಜಿ, ವೆನಿಯರಾಲಜಿ ಮತ್ತು ಲೆಪ್ರೊಲಜಿಯಲ್ಲಿನ ಅಧ್ಯಯನದ ಪ್ರಕಾರ, ಬೆಳ್ಳುಳ್ಳಿ ನಿಮ್ಮ ಕೂದಲು ಉದುರುವಿಕೆಯ ಸಮಸ್ಯೆಗಳಿಗೆ ಪರಿಹಾರ ಏಕೆಂದರೆ ಹೆಚ್ಚಿನ ಪ್ರಮಾಣದಲ್ಲಿ ಅಲಿಸಿನ್ ಮತ್ತು ಸಲ್ಫರ್ ಇರುತ್ತದೆ. ಬೆಳ್ಳುಳ್ಳಿಯ ಒಂದು ಎಸೆಳನ್ನು ತೆಗೆದುಕೊಂಡು ಅದನ್ನು ನಿಮ್ಮ ನೆತ್ತಿಯ ಮೇಲೆ ಉಜ್ಜಿ, ಅದನ್ನು ಚನ್ನಾಗಿ ಹಿಂಡಿ ರಸ ತೆಗೆದು ಉಜ್ಜಿದರೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಬೆಳ್ಳುಳ್ಳಿ ಕೂಡ ತಲೆಹೊಟ್ಟು ತಡೆಯುವಲ್ಲಿ ಸಹಾಯ ಮಾಡುತ್ತದೆ.
ನೀವು ನೆತ್ತಿಯ ತುರಿಕೆಯ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ, ಬೆಳ್ಳುಳ್ಳಿ ಮತ್ತು ಎಣ್ಣೆಯನ್ನು ಮಿಶ್ರಣ ಮಾಡಿ, ಅದನ್ನ ಮಸಾಜ್ ಮಾಡಿ. ಸ್ವಲ್ಪ ಸಮಯದ ನಂತರ ಅದನ್ನು ತೊಳೆಯಿರಿ. ಉತ್ತಮ ಫಲಿತಾಂಶ ಪಡೆಯಲು ಇದನ್ನು ನಿಯಮಿತವಾಗಿ ಬಳಸಿ. ಬೆಳ್ಳುಳ್ಳಿ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಲಭ್ಯವಿರುವ ಅಲ್ಲಿಸಿನ್ ರಕ್ತ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತದೆ ಅದು ನಿಮ್ಮ ಕೂದಲು ಬೆಳೆಯುವ ವೇಗವನ್ನು ಹೆಚ್ಚು ಮಾಡುತ್ತದೆ ಎನ್ನಲಾಗುತ್ತಿದೆ.
ಕೇವಲ ಕೂದಲಿಗೆ ಮಾತ್ರವಲ್ಲ, ಬೆಳ್ಳುಳ್ಳಿ ನಿಮ್ಮ ಚರ್ಮಕ್ಕೂ ಪ್ರಯೋಜನಕಾರಿ ಮತ್ತು ನಿಮಗೆ ತಾಜಾ ಮತ್ತು ಹೊಳೆಯುವ ಚರ್ಮವನ್ನು ನೀಡುತ್ತದೆ. ಇದು ರಂಜಕ, ಸತು, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ನಂತಹ ಖನಿಜಗಳಿಂದ ಸಮೃದ್ಧವಾಗಿದೆ, ಇದು ಚರ್ಮದ ಸಮಸ್ಯೆಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ.
ಮೊಡವೆಗಳಿಂದ ಪರಿಹಾರ ಪಡೆಯಲು ಬೆಳ್ಳುಳ್ಳಿ ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್ಗಳು ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತದೆ. ಒಂದು ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ನಿಮ್ಮ ಮೊಡವೆ ಮೇಲೆ ಉಜ್ಜಿ. ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಮೊಡವೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತದೆ.
ಇದು ರಕ್ತ ಪರಿಚಲನೆ ಮತ್ತು ಮೊಡವೆಗಳಿಂದ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಮದು ಸಾಬೀತಾಗಿದೆ. ಬೆಳ್ಳುಳ್ಳಿ ರಸವು ಹುಣ್ಣುಗಳು, ದದ್ದುಗಳು ಮತ್ತು ಗುಳ್ಳೆಗಳನ್ನು ಸಹ ನಿವಾರಣೆ ಮಾಡಲು ಪ್ರಯೋಜನಕಾರಿಯಾಗಿದೆ.