ಭೋಪಾಲ್:ಮೇಕಪ್ ಪ್ರಿಯರಿಗೆ ಮಳೆಗಾಲ ಬಂತೆಂದರೆ ಸ್ವಲ್ಪ ಕಿರಿಕಿರಿ. ಹಾಗಾಗಿ ಮಳೆಗಾಲದಲ್ಲಿ ಮೇಕಪ್ ಬಗ್ಗೆ ಹೆಚ್ಚು ನಿಗಾವಹಿಸುವುದು ಅಗತ್ಯ. ವಾತಾವರಣದ ತೇವಾಂಶ, ತೇವಯುಕ್ತ ಗಾಳಿ, ಮಳೆಯ ಹನಿ ಇವೆಲ್ಲದರಿಂದ ತ್ವಚೆಗೆ ರಕ್ಷಣೆಯೂ ಬೇಕು. ಮೇಕಪ್ ಅಳಿಸದೆ ಇಡೀ ದಿನ ತಾಜಾತನ ಕಾಪಾಡಿಕೊಳ್ಳವುದೂ ಮುಖ್ಯ. ಇಲ್ಲದಿದ್ದರೆ ಅಂದಗೆಡುವುದು ಗ್ಯಾರಂಟಿ.
ಈಗ ಮಾನ್ಸೂನ್‌ಗಾಗಿಯೇ ಲಾಂಗ್ ಸ್ಟೇ ಲಿಪ್‌ಸ್ಟಿಕ್‌ಗಳು, ಕಾಜಲ್ ಗಳು, ಕ್ರೀಮ್ ಗಳು ಬಂದಿವೆ. ಸ್ವಲ್ಪ ದುಬಾರಿಯಾದರೂ ಮಳೆಹನಿ ಬಿದ್ದರೂ ಅಂದಗೆಡದೇ ತಾಜಾವಾಗಿ ಕಾಣುತ್ತೆ. ಮುಖಕ್ಕೆ ಹಚ್ಚಿದ ಫೌಂಡೇಶನ್, ಕಣ್ಣಿಗೆ ಹಚ್ಚಿಕೊಂಡ ಮಸ್ಕರಾ ನೀರು ತಾಗಿ ಅಳಿಸಬಹುದು. ಹಾಗಾಗಿ ಮಳೆಗಾಲದಲ್ಲಿ ಆದಷ್ಟು ತೆಳುವಾದ ಮೇಕಪ್ ಮಾಡಿಕೊಳ್ಳಬೇಕು, ವಾಟರ್‌ಪ್ರೂಫ್ ಐಲೈನರ್ ಬಳಸುವುದು ಉತ್ತಮ. ಇನ್ನು ಕೆನ್ನೆಗಳಿಗೆ ತೆಳುವಾಗಿ ಹಾಗೂ ತಿಳಿ ಬಣ್ಣದ ಚೀಕ್ ರೋಸ್ ಬಳಸಿದರೆ ಒಳ್ಳೆಯದು.
ಒಣ ಮತ್ತು ಸಾಮಾನ್ಯ ಚರ್ಮದವರು ಟೋನರ್ ಅನ್ನು ಬಳಸಿಯೂ ಮೇಕಪ್ ಮಾಡಿಕೊಳ್ಳಬಹುದು. ಎಣ್ಣೆ ಚರ್ಮ ಇರುವವರು ಅತ್ಯಂತ ತೆಳು ಮೇಕಪ್ ಬಳಸುವುದು ಸೂಕ್ತ.
ಇನ್ನು ವಿವಿಧ ರೀತಿಯ ಕ್ಲೆನ್ಸಿಂಗ್ ಕ್ರೀಂಗಳೂ ಮಳೆಗಾಲದ ಚಳಿಯಿಂದ ಚರ್ಮವನ್ನು ಕಾಪಾಡಬಲ್ಲದು. ಇದನ್ನು ಜೇನುತುಪ್ಪ, ಬಾದಾಮಿ ಎಣ್ಣೆ, ಬೋರಾಕ್ಸ್ ಪೌಡರ್, ರೋಸ್ ವಾಟರ್ ಎಸ್ಸೆನ್ಸ್‌ಗಳಿಂದ ತಯಾರಿಸಲಾಗುತ್ತದೆ. ಇದನ್ನು ನಿಯಮಿತವಾಗಿ ಬಳಸಿದರೆ ಮಳೆಗಾಲದಲ್ಲಿ ತ್ವಚೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.